ಸಾಧನೆಯ ಸಾರ್ಥಕತೆ ಮತ್ತೊಬ್ಬ ಸಾಧಕನ ನಿರ್ಮಾಣದಲ್ಲಿದೆ

ಸಾಧನೆಯ ಸಾರ್ಥಕತೆ ಮತ್ತೊಬ್ಬ ಸಾಧಕನ ನಿರ್ಮಾಣದಲ್ಲಿದೆ
ಶಿವಮೊಗ್ಗ (ಕೋಣಂದೂರು):  ಸಾಧನೆಯ ಹಾದಿಯಲ್ಲಿ ಪ್ರತಿಯೊಂದು ಹೆಜ್ಜೆಯೂ ಜಾಗೃತಿಯ ಬೆಳಕಿನಲ್ಲಿ ಸಾಗಬೇಕು. ಶಿಖರವನ್ನು ತಲುಪುವುದಷ್ಟೇ ಸಾಧನೆಯ ಪರಿಪೂರ್ಣತೆ ಅಲ್ಲ; ಆ ಶಿಖರದತ್ತ ಮತ್ತೊಬ್ಬರನ್ನು ಕೈಹಿಡಿದು ನಡೆಸಿ, ಅವರನ್ನೂ ಸಾಧಕರನ್ನಾಗಿ ರೂಪಿಸಿದಾಗಲೇ ನಿಜವಾದ ಸಾರ್ಥಕತೆ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಮಂಗಳವಾರ ಕೋಣಂದೂರಿನ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.100% ಫಲಿತಾಂಶ ಪಡೆದ ರಾಷ್ಟ್ರೀಯ ಪ್ರೌಢಶಾಲೆ, ರಾಷ್ಟ್ರೀಯ ಪದವಿಪೂರ್ವ ಕಾಲೇಜು, ಹುಂಚದ ಪದ್ಮಾಂಬ ಪ್ರೌಢಶಾಲೆಯ ಬೋಧಕ ಸಿಬ್ಬಂದಿ ವರ್ಗಕ್ಕಾಗಿ ಏರ್ಪಡಿಸಿದ್ದ ವಿಶೇಷ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಒತ್ತಡದ ತಂತ್ರಕ್ಕಿಂತ ಆತ್ಮವಿಶ್ವಾಸದ ಮಂತ್ರವೇ ಬದುಕನ್ನು ಮುನ್ನಡೆಸುವ ಶಕ್ತಿ. ಕಲಿಕೆಗೆ ಅಂತ್ಯವಿಲ್ಲ, ಬದುಕಿನ ಪರೀಕ್ಷೆಗಳಿಗೂ ವಿರಾಮವಿಲ್ಲ. ಆದ್ದರಿಂದ ಪ್ರತಿಯೊಂದು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸುವ ಮನೋಬಲವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಪರಿಣಾಮಕಾರಿ ಬೋಧನೆಯೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಶಿಕ್ಷಕರ ಶ್ರೇಷ್ಠ ಕರ್ತವ್ಯ. ಪ್ರತಿಯೊಂದು ಬೋಧನಾ ಕೌಶಲ್ಯವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಳಿಯದ ಮೌಲ್ಯವಾಗಿ ಉಳಿಯುವಂತಿರಬೇಕು.
ಇಂದು ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿರುವುದು ಕಳವಳಕಾರಿ. ಆದರೆ ರಾಷ್ಟ್ರೀಯ ಶಿಕ್ಷಣ ಸಮಿತಿಯ (ಎನ್‌ಇಎಸ್) ಅನುದಾನಿತ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಆಡಳಿತ ಮಂಡಳಿ ದೂರದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ನಿರಂತರವಾಗಿ ಒದಗಿಸುವ ಮೂಲಕ ಶಿಕ್ಷಣದ ಶ್ರೇಷ್ಠತೆಯನ್ನು ಕಾಯ್ದುಕೊಂಡಿದೆ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಎನ್ಇಎಸ್ ಸಂಸ್ಥೆಯ ಶಿಕ್ಷಣ ಪರಂಪರೆಯಲ್ಲಿ ಕೋಣಂದೂರಿನ ಶಾಲಾ-ಕಾಲೇಜುಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ. ಇಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಕೇವಲ ಬೋಧನೆಗೆ ಸೀಮಿತವಾಗದೆ, ಆತ್ಮೀಯತೆ, ವಿಶ್ವಾಸ ಮತ್ತು ಜವಾಬ್ದಾರಿಯ ಮೌಲ್ಯಗಳ ಮೇಲೆ ನಿರ್ಮಾಣಗೊಂಡಿದೆ.
ಮಲೆನಾಡಿನ ಭಾಗದಲ್ಲಿರುವ ಎನ್‌ಇಎಸ್‌ನ ವಿದ್ಯಾಸಂಸ್ಥೆಗಳು ಸತತವಾಗಿ ಶೇ.100 ಫಲಿತಾಂಶ ದಾಖಲಿಸುವುದರ ಜೊತೆಗೆ, ಅತ್ಯುತ್ತಮ ಗುಣಾತ್ಮಕ ಸಾಧನೆಯ ಮೂಲಕ ಮಾದರಿಯಾಗಿ ಹೊರಹೊಮ್ಮಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೂ ಪಟ್ಟಣದಂತೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಸಂಸ್ಥೆಯ ಧ್ಯೇಯಕ್ಕೆ ಈ ಸಾಧನೆಗಳು ಮತ್ತಷ್ಟು ಬಲ ತುಂಬಿವೆ ಎಂದು ತಿಳಿಸಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಮಾಧುರಾವ್, ಎಂ.ಎಸ್.ಅನಂತದತ್ತಾ, ಆಜೀವ ಸದಸ್ಯರಾದ ಸದಾನಂದ, ಅನಂತಕೃಷ್ಣ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ರಾಷ್ಟ್ರೀಯ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಕೆ.ಬಿ.ಪ್ರಕಾಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹಾಂತೇಶಗೌಡ, ಹುಂಚ ಪದ್ಮಾಂಬ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಹ್ಲಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *