ISO ಪ್ರಮಾಣ ಪತ್ರ ಪಡೆದ ದ. ಭಾರತದ ಮೊದಲಮಠ ಶಿವಮೊಗ್ಗದ ರಾಘವೇಂದ್ರ ಸ್ವಾಮಿ
ಮಠ
ಶಿವಮೊಗ್ಗ: ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಉತ್ತಮ ಗುಣಮಟ್ಟದ ನಿರ್ವಹಣೆಗೆ ನೀಡುವ ಪ್ರಮಾಣಪತ್ರದ ಜೊತೆಗೆ ಪರಿಸರ ನಿರ್ವಹಣಾ ವ್ಯವಸ್ಥೆ ಹಾಗೂ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ನಿರ್ವಹಣಾ ವ್ಯವಸ್ಥೆ ಹೀಗೆ ಮೂರು ಹಂತದ ISO ಪ್ರಮಾಣಪತ್ರ ಲಭಿಸಿದೆ.
ಈ ಮೂರು ಪ್ರಮಾಣ ಪತ್ರಗಳನ್ನು ಪಡೆದ ಮೊದಲ ಹಾಗೂ ಏಕೈಕ ಮಠವಾಗಿ ಶಿವಮೊಗ್ಗದ ಶ್ರೀರಾಘವೇಂದ್ರ ಸ್ವಾಮಿ ಮಠ ಹೊರಹೊಮ್ಮಿದೆ. ಇದು ಮಠದ ಆಡಳಿತ ಮಂಡಳಿ, ಭಕ್ತರು ಹಾಗೂ ದಾನಿಗಳಿಗೆ ಸಂತಸ ತಂದಿದೆ.
ಶಿವಮೊಗ್ಗದ ಹೃದಯ ಭಾಗ ದುರ್ಗಿಗುಡಿ ಪಾರ್ಕ್ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠವು ಹಲವು ದಶಕಗಳಿಂದ ಇದೆ. ಮಠವು ಧಾರ್ಮಿಕ, ಸಾಮಾಜಿಕ ಹಾಗೂ ಜನೋಪಯೋಗಿ ಸೇವಾ ಕಾರ್ಯಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬಂದಿದೆ. ಮಠದ ಸೇವಾ ಸಮಿತಿಯವರು ನಡೆದ ಈ ಕಾರ್ಯಗಳನ್ನು ಗುರುತಿಸಿ ಐಎಸ್ಒ ಸಂಸ್ಥೆ ಮೂರು ಪ್ರಮಾಣ ಪತ್ರಗಳನ್ನು ಒಟ್ಟಿಗೆ ನೀಡಿದೆ. ಈ ರೀತಿಯ ಪ್ರಮಾಣ ಪತ್ರವನ್ನು ಕೈಗಾರಿಕಾ ವಲಯ, ಸೇವಾ ವಲಯಗಳಿಗೆ ಮಾತ್ರ ನೀಡುತ್ತಿತ್ತು. ಇದೇ ಮೊದಲ ಬಾರಿಗೆ ಶ್ರೀರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಕಾರ್ಯವನ್ನು ನೋಡಿ, ಪರಿಶೀಲಿಸಿ, ಜನಾಭಿಪ್ರಾಯವನ್ನು ಸಂಗ್ರಹಿಸಿ ಹಾಗೂ ಆಡಳಿತವನ್ನು ನೋಡಿ ನೀಡಿದೆ.
ISO 9001:2015- ಗುಣಮಟ್ಟ ನಿರ್ವಹಣಾ ವ್ಯವಸ್ಥೆ.
ISO 14001:2015- ಪರಿಸರ ನಿರ್ವಹಣಾ ವ್ಯವಸ್ಥೆ.
ISO 45001: 2018- ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ನಿರ್ವಹಣಾ ವ್ಯವಸ್ಥೆ.
ಹೀಗೆ ಮೂರು ಹಂತದ ಪ್ರಶಸ್ತಿಯನ್ನು ಪಡೆದ ಮೊದಲ ಮಠವಾಗಿದೆ. ಇವು ಕೇವಲ ಪ್ರಮಾಣ ಪತ್ರಗಳಲ್ಲ. ಇದು ಮಠವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಗಿವೆ. ಮಠದ ಆಡಳಿತದಲ್ಲಿನ ಪಾರರ್ದಶಕತೆ, ಗುಣಮಟ್ಟ, ಪರಿಸರ ಕಾಳಜಿ ಹಾಗೂ ಸುರಕ್ಷತೆಯ ಬಗ್ಗೆ ಪರಿಶೀಲಿಸಿ, ಜಾಗತಿಕ ಮಟ್ಟದಲ್ಲಿ ಧೃಢೀಕರಿಸುವ ಮಾನ್ಯತೆಗಳಾಗಿವೆ. ಅಲ್ಲದೆ ಐಎಸ್ಒದವರು ಶ್ರೀ ರಾಘವೇಂದ್ರ ಸೇವಾ ಸಮಿತಿ ಮಠದ ವತಿಯಿಂದ ನಡೆಯುವ ಮಠದ ನಿರ್ವಹಣೆ, ಭಕ್ತರ ಸೇವೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವೈದ್ಯಕೀಯ ಶಿಬಿರಗಳು ಸೇರಿದಂತೆ ಶಾಲೆ ದತ್ತು ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವ ಕುರಿತ ಪ್ರಮಾಣೀಕರಣಗಳಾಗಿವೆ.
ಐಎಸ್ಒದ ಮೂರು ಪ್ರಮಾಣೀಕರಣ ಪತ್ರಗಳಿಂದ ಮಠಕ್ಕೆ ಒಂದು ಹೆಮ್ಮೆಯ ಗರಿಯಾಗುವುದರ ಜೊತೆಗೆ ಭಕ್ತರಿಗೆ ಹಾಗೂ ದಾನಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಮಠದ ಸೇವಾ ಸಮಿತಿಯವರ ಜವಾಬ್ದಾರಿ ಹೆಚ್ಚಾಗಲಿದೆ. ಮಠದಲ್ಲಿ ಸೇವೆಗಳ ಗುಣಮಟ್ಟ ಹೆಚ್ಚಾಗುತ್ತದೆ. ಆಡಳಿತದಲ್ಲಿ ಪಾರದರ್ಶಕತೆ ಬರುತ್ತದೆ.


