ಪತ್ರಕರ್ತ ಭಂಡಿಗಡಿ ನಂಜುಂಡಪ್ಪ ನಿಧನ
ಶಿವಮೊಗ್ಗ: ಹಿರಿಯ ಪತ್ರಕರ್ತ ವಾಯ್ಸ್ ಶಿವಮೊಗ್ಗ ಪತ್ರಿಕೆ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ (೭೫) ಅವರು ಸೋಮವಾರ ಮಧ್ಯಾಹ್ನ ನಿಧನರಾದರು. ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಕಳೆದ ಕೆಲ ದಿನಗಳಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದ ಕಾರಣ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
೪೨ ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿದ್ದ ಅವರು, ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಪದಾಧಿಕಾರಿ, ರಾಜ್ಯ ಪ್ರತಿನಿಧಿ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನ ಆರಂಬಿಕ ಟ್ರಸ್ಟಿಯಾಗಿದ್ದ ಅವರು, ೪೨ ವರ್ಷಗಳಿಂದ ನಿರಂತರವಾಗಿ ಪತ್ರಿಕಾ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂಜುಂಡಪ್ಪ ನಿಧನಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಸಂಪಾದಕರ ಸಂಘ ಸಂತಾಪ ಸೂಚಿಸಿವೆ.


