ಎಸ್.ಎಸ್.ಎಲ್.ಸಿ. ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ನಮ್ಮ ಕಣ್ಮುಂದೆ ಬಂದು ನಿಲ್ಲುವುದು ಕೇವಲ ಆರ್ಟ್ಸ್ ಕಾಮರ್ಸ್, ಸೈನ್ಸ್ ಮಾತ್ರ. ಆದರೆ, ಇದನ್ನು ಹೊರತುಪಡಿಸಿ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಅನೇಕ ಮಾರ್ಗಗಳಿವೆ ಎಂದು ಎಜುರೈಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಪ್ರೊ. ಎನ್. ದಿವಾಕರ್ ಹೇಳಿದರು. ಮಂಗಳವಾರ ಸಂಜೆ ಶಿವಮೊಗ್ಗದ ತುಳಜಾ ಭವನ್ ನಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜ ಹಾಗೂ ಶ್ರೀರಾಮ ಸೇವಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿವತಿಯಿಂದ ಆಯೋಜಿಸಲಾಗಿದ್ದ, ಕ್ಯಾರಿಯರ್ ಗೈಡೆನ್ಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರಸ್ತುತ ಹಲವಾರು ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು, ಕೇವಲ ಬೆರಳೇಣಿಕೆಯ ಅವಕಾಶಗಳಿಗೆ ಜೋತು ಬಿದ್ದು, ಭವಿಷ್ಯ ಹಾಳು ಮಾಡಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಸಿನಿಮಾಟೋಗ್ರಫಿ, ಅನಿಮೇಷನ್, ಫ್ಯಾಷನ್ ಡಿಸೈನ್, ಜಾಬ್ ಓರಿಯೆಂಟೆಡ್ ಕೋರ್ಸ್ ಗಳು, ಕೌಶಲ್ಯಾಭಿವೃದ್ಧಿ ಕೋರ್ಸ್ ಗಳು ನಮಗೆ ಕೈ ಜೀವನದ ಕೈ ಹಿಡಿಯುವ ಮಾರ್ಗಗಳಾಗಿವೆ ಎಂದು ಹೇಳಿದರು. ಸದ್ಯ ನಮ್ಮ ಕಣ್ಮುಂದೆ ಎಐ ಇದ್ದು, ನಮ್ಮ ಅನೇಕ ಕೆಲಸಗಳನ್ನು ಕಿತ್ತುಕೊಂಡಿದೆ. ಆದರೆ, ಈ ಎಐ ಕೋರ್ಸ್ ಕೂಡ ನಮಗೆ ಉಪಯುಕ್ತವಾಗಿದ್ದು, ಅನೇಕ ಸಂಸ್ಥೆಗಳಲ್ಲಿ ಇದಕ್ಕೆ ಭವಿಷ್ಯವಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಲು ಉತ್ತಮ ಯೋಜನೆ ರೂಪಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು
ಕಾನೂನು ಶಾಸ್ತ್ರದಲ್ಲೂ ಸಾಧನೆ ಮಾಡುವ ಅವಕಾಶವಿದ್ದು, ಎಂ.ಬಿ.ಬಿ.ಎಸ್. ಪದವಿ ಪಡೆಯುವುದು ಸಹ ಉಳ್ಳವರಿಗೆ ಮಾತ್ರ ಎಂಬಂತಾಗಿದೆ. ಅನೇಕ ವಿವಿಗಳಲ್ಲಿ ಅಗತ್ಯವಾದ ಕೋರ್ಸ್ ಗಳ ಕೊರತೆ ಇದ್ದು, ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಚತುರತೆಯಿಂದ ಹೆಜ್ಜೆಯಿಡುವುದು ಅವಶ್ಯಕವಾಗಿದೆ. ಅಲ್ಲದೇ ದೇಶವನ್ನು ಕಾಯುವ ಸೈನಿಕನಾಗುವುದಷ್ಟೇ ಅಲ್ಲದೇ, ಸೈನಿಕರ ಜೊತೆಗೆ ವಿವಿಧ ಕೋರ್ಸ್ ಗಳನ್ನು ಕರಗತ ಮಾಡಿಕೊಂಡು ಸೈನಿಕರಿಗೆ ಸಹಕಾರಿಯಾಗುವ ಅನೇಕ ಪೋಸ್ಟ್ ಗಳಲ್ಲೂ ತಾವು ಕರ್ತವ್ಯ ನಿರ್ವಹಿಸಬಹುದಾಗಿದೆ. ಸೈನಿಕ ಎಂದರೆ ಕೇವಲ ಗಡಿ ಕಾಯುವುದಷ್ಟೇ ಅಲ್ಲದೇ, ತಾಂತ್ರಿಕವಾಗಿಯೂ ಪರಿಣಿತಿ ಹೊಂದುವ ಮೂಲಕ ನಮ್ಮ ಯೋಧರಿಗೆ ಸಹಕಾರಿಯಾಗಿರಬಹುದಾಗಿದೆ. ತಮ್ಮ ಮಾತಿನುದ್ದಕ್ಕೂ ವಿವಿಧ ಕೋರ್ಸ್ ಗಳ ಕುರಿತು ನೆರೆದಿದ್ದ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರಲ್ಲದೇ, ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವೇ ಸವೆಸಿರುತ್ತಾರೆ. ಇದನ್ನು ಮನಗಂಡು ವಿದ್ಯಾರ್ಥಿಗಳು ತಮ್ಮ ಹಾಗೂ ಪೋಷಕರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುನ್ನಡೆಯಬೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ಶ್ರೀರಾಮ ಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಸೇರಿದಂತೆ ಇತರರಿದ್ದರು.

