80 ನೇ ಸ್ವಾತಂತ್ರ್ಯೋತ್ಸವ
ಈಸೂರಿನ ಸ್ವಾಭಿಮಾನದ ಹಾದಿಯಲ್ಲಿ ನಾಡಿನ ಅಭಿವೃದ್ಧಿ – ಎಸ್ ಮಧು ಬಂಗಾರಪ್ಪ
ಶಿವಮೊಗ್ಗ, ಆ, 15(ಕರ್ನಾಟಕ ವಾರ್ತೆ):
ಶಿವಮೊಗ್ಗ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ನೆಲೆಯಾಗಿದ್ದು, ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರು ಹಾಗೂ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಈಸೂರಿನ ಹೋರಾಟಗಾರರ ತ್ಯಾಗವು ನಮಗೆಲ್ಲರಿಗೂ ಸದಾ ಸ್ಪೂರ್ತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ
80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಶುಭಾಶಯ ಕೋರಿ ಸಂದೇಶ ನೀಡಿರುವ ಅವರು, “ಸ್ವಾತಂತ್ರ್ಯ ಎಂದರೆ ಕೇವಲ ಧ್ವಜ ಹಾರಿಸುವುದಲ್ಲ, ಪ್ರತಿಯೊಬ್ಬ ಮನುಷ್ಯನೂ ಗೌರವದಿಂದ ಬದುಕುವ ವಾತಾವರಣ ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯ. ಹಸಿವು, ಬಡತನ ಮತ್ತು ಅಸಮಾನತೆಯ ವಿರುದ್ಧದ ಹೋರಾಟವೇ ನಮ್ಮ ಇಂದಿನ ಕರ್ತವ್ಯ” ಎಂದಿದ್ದಾರೆ.
ಯುವಶಕ್ತಿಯನ್ನು ಸಮಾಜ ನಿರ್ಮಾಣದಲ್ಲಿ ತೊಡಗಿಸುವ ಉದ್ದೇಶದಿಂದ ರಾಜ್ಯಾದ್ಯಂತ 10,000 “ಭಾರತ್ ಜೋಡೋ ಯುವಕ ಸಂಘ” ಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರತಿ ಯುವಕ ಸಂಘಕ್ಕೆ ಸರ್ಕಾರವು ವಾರ್ಷಿಕ ರೂ.10 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ನೀಡಲಿದ್ದು, ಯುವಜನತೆ ಉದ್ಯೋಗ, ಶಿಕ್ಷಣ ಮತ್ತು ಸಮಾಜದ ಏಳಿಗೆಗಾಗಿ ಧ್ವನಿ ಎತ್ತಲು ಹಾಗೂ ಸರ್ಕಾರದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಇದು ವೇದಿಕೆಯಾಗಲಿದೆ.


