ಫಾರ್ಮಸಿ ಕಾಲೇಜಿನಲ್ಲಿ ‘ವೈಭವ – 2026’ ಉದ್ಘಾಟನೆ
ಆರೋಗ್ಯದೊಂದಿಗೆ ಚೆಲ್ಲಾಟವಾಡುವ ನಕಲಿ ಔಷಧ ವ್ಯಾಪಾರ ಖಂಡನೀಯ
ಶಿವಮೊಗ್ಗ: ಅವಧಿ ಮೀರಿದ ಔಷಧಗಳಿಗೆ ಹೊಸ ಲೇಬಲ್ಗಳನ್ನು ಅಂಟಿಸಿ ಮರುಮಾರಾಟ ಮಾಡುವಂತಹ ಜಾಲ ಸಕ್ರಿಯವಾಗಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ‘ವೈಭವ-2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಕಲಿ ಔಷಧಗಳ ವ್ಯಾಪಾರ ನಡೆಸುವ ಜಾಲ ನಮ್ಮ ಸಮಾಜದ ನಡುವೆ ಸಕ್ರಿಯವಾಗಿರುವುದು ಅತ್ಯಂತ ಆತಂಕಕಾರಿ ವಿಷಯ. ಅದೇ ರೀತಿ ಕೊಳೆತ ಹಾಗೂ ಕಳಪೆ ಆಹಾರ ಪದಾರ್ಥಗಳಿಂದ ಅಡುಗೆ ತಯಾರಿಸಿ ಜನರಿಗೆ ಬಡಿಸುವ ವ್ಯವಸ್ಥೆಯೂ ಕೆಲವೆಡೆ ಕಂಡುಬರುತ್ತಿದೆ. ಇಂತಹ ಚಟುವಟಿಕೆಗಳಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಜನರ ಆರೋಗ್ಯದ ಬಗ್ಗೆ ಭಾವಿ ಫಾರ್ಮಸಿಸ್ಟ್ ಗಳು ಹೆಚ್ಚಿನ ಕಾಳಜಿ ವಹಿಸಬೇಕಿದೆ.
ಸಮಾಜದಲ್ಲಿ ಆರೋಗ್ಯ ಮತ್ತು ಶಿಕ್ಷಣ ಪರಿಣಾಮಕಾರಿಯಾಗಿ ಬೇರೂರಿದಾಗ ಮಾತ್ರ ದೇಶದ ಪ್ರಗತಿಗೆ ಭದ್ರ ಬುನಾದಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಫಾರ್ಮಸಿಸ್ಟ್ಗಳು, ಕೇವಲ ಔಷಧ ವಿತರಿಸುವ ವೃತ್ತಿಪರರಾಗಿ ಉಳಿಯದೆ, ಅನ್ಯಾಯ, ನಕಲಿ ಔಷಧಗಳ ವ್ಯಾಪಾರ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಹೊಣೆಗಾರಿಕೆಯನ್ನು ವಹಿಸಬೇಕು. ಸಾಮಾಜಿಕ ನ್ಯಾಯ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಾರ್ಯಗಳು ಭಾವಿ ಫಾರ್ಮಸಿಸ್ಟ್ಗಳ ಮುಂದೆ ಇರುವ ಬಹುದೊಡ್ಡ ಜವಾಬ್ದಾರಿಯಾಗಿದೆ.

