ಶಿವಮೊಗ್ಗದಲ್ಲಿ ದಸರಾ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ
ಶಿವಮೊಗ್ಗ :- ಪ್ರತಿ ವರ್ಷದಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ನೇತೃತ್ವದಲ್ಲಿ ದಸರಾ ರಾಜ್ಯ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗುವುದು. ಕವಿಗಳು ಪಶ್ಚಿಮ ಘಟ್ಟಗಳು ಸೇರಿದಂತೆ ಮಲೆನಾಡಿಗರ ಆತಂಕಕ್ಕೆ ಕಾರಣವಾದ ಕಸ್ತೂರಿ ರಂಗನ್ ವರದಿ ಮತ್ತು ಶರಾವತಿ ಪಂಪಡ್ ಸ್ಟೋರೇಜ್ ಯೋಜನೆಯಲ್ಲಿ ಜನಪರವಾದ ಕಾಳಜಿ, ಬರದ ಕರಿನೆರಳಲ್ಲಿ ಬದುಕು ಕಟ್ಟಿಕೊಳ್ಳವ ಸಾಮಾನ್ಯರ ಗೋಳು, ಸರ್ಕಾರದ ಯೋಜನೆ ಯೋಚನೆ, ನಿರುದ್ಯೋಗ, ಯುವಜನರ ತಲ್ಲಣ, ದ್ವಿಭಾಷಾ ನೀತಿಯ ಹೆಸರಲ್ಲಿ ಕನ್ನಡ ಭಾಷೆಗೆ ಅನ್ಯಾಯ ಮಾಡುತ್ತಿರುವ ಇಂಗ್ಲೀಷ್ ಭಾಷಾ ಭ್ರಮಾಲೋಕದ ವಿಚಾರ, ಸ್ಪರ್ಧಾತ್ಮಕ ಪರೀಕ್ಷೆಗಳು ವಿಶ್ವಾಸರ್ಹತೆ ಕಳೆದುಕೊಳ್ಳುತ್ತಿವೆ. ವಿದ್ಯಾವಂತರೆ ವಂಚನೆಯ ಮುಂಚೂಣಿಯಲ್ಲಿರುವ ಈ ವ್ಯವಸ್ಥೆಯ ಕುರಿತು ತಮ್ಮ ಕವನದ ಮೂಲಕ ಅಭಿವ್ಯಕ್ತ ಪಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ವರ್ತಮಾನದ ಹಲವು ತಲ್ಲಣಗಳಿಗೆ ಕವಿ ಹೃದಯ ಹೇಗೆ ಸ್ಪಂದಿಸಲಿದೆ ಎಂಬುದರ ಕತೂಹಲ ಜನಸಾಮಾನ್ಯರು, ಸಾಹಿತ್ಯ ಓದುಗರಲ್ಲಿದೆ. ಹೊಸತಲೆಮಾರಿಗೆ ಬದುಕಿನ ಬರವಸೆಯ ಜೊತೆಗೆ ಸೃಜನಶೀಲ ಮನಸ್ಥಿತಿಗೆ ಸಾಹಿತ್ಯವೇ ಮದ್ದಾಗಬೇಕು. ಎಳೆಯರಿಂದ ಹಿರಿಯರವರೆಗೆ ಎಲ್ಲರೂ ಬರೆಯಬೇಕು. ಬರೆದ ಕವನಗಳನ್ನು ವಾಚಿಸಲು ದಸರಾ ಕವಿಗೋಷ್ಠಿ ತಮಗೆ ಅವಕಾಶ ನೀಡಲಿದೆ. ಕಳೆದ ಹಲವು ವರ್ಷಗಳಿಂದ ದಸರಾ ಕಾವ್ಯಗೋಷ್ಠಿ ಏರ್ಪಡಿಸುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿಯ ವಿಶಿಷ್ಠವಾದ ರೀತಿಯಲ್ಲಿ ಚಿಂತನೆ ಮಾಡಲು ಕವಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಡಿ. ಮಂಜುನಾಥ ವಿವರಿಸಿದ್ದಾರೆ.
ಕವಿಗಳು ತಮ್ಮ ಕವನಗಳ ಜೊತೆಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿ ಕಳುಹಿಸಲು ಕೋರುತ್ತೇವೆ. ಕವನಗಳನ್ನು ಸೆಪ್ಟೆಂಬರ್ ೩೦ ರೊಳಗೆ ಡಿ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಆರ್. ಟಿ. ಓ. ಕಚೇರಿ ರಸ್ತೆ, ಶಿವಮೊಗ್ಗ ಇವರಿಗೆ ತಲುಪಿಸಲು ಕೋರುತ್ತೇವೆ.
ಶಿವಮೊಗ್ಗದಲ್ಲಿ ದಸರಾ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ
