ಡಾ. ಶರತ್‌ ಮರಿಯಪ್ಪ ಫೌಂಡೇಷನ್‌ ನ ಉದ್ಯೋಗ ಪಥಕ್ಕೆ ಚಾಲನೆ, ಪದವಿ ಕೈಯಲ್ಲಿದ್ದರೆ ಸಾಲದು; ಪ್ರತಿಭೆ–ಕೌಶಲ್ಯವಿದ್ದಾಗಲೇ ಯಶಸ್ಸು ಸಾಧ್ಯ : ಆಯನೂರು ಮಂಜುನಾಥ್‌

ಡಾ. ಶರತ್‌ ಮರಿಯಪ್ಪ ಫೌಂಡೇಷನ್‌ ನ ಉದ್ಯೋಗ ಪಥಕ್ಕೆ ಚಾಲನೆ
ಪದವಿ ಕೈಯಲ್ಲಿದ್ದರೆ ಸಾಲದು; ಪ್ರತಿಭೆ–ಕೌಶಲ್ಯವಿದ್ದಾಗಲೇ ಯಶಸ್ಸು ಸಾಧ್ಯ : ಆಯನೂರು ಮಂಜುನಾಥ್‌

ಶಿವಮೊಗ್ಗ: ಉನ್ನತ ಪದವಿ ಪಡೆದ ಮಾತ್ರಕ್ಕೆ ವ್ಯಕ್ತಿ ಶಿಕ್ಷಣ ಪಡೆದಿದ್ದಾನೆ ಎಂದು ಹೇಳಲಾಗದು. ಅಕ್ಷರಜ್ಞಾನಕ್ಕೂ ಶಿಕ್ಷಣಕ್ಕೂ ದೊಡ್ಡ ವ್ಯತ್ಯಾಸವಿದೆ. ವ್ಯಕ್ತಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ತರಬೇತಿ ನೀಡಿ, ಸಮಾಜ ಹಾಗೂ ಜಗತ್ತಿನ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವುದೇ ಸಮಗ್ರ ಶಿಕ್ಷಣದ ಉದ್ದೇಶವಾಗಬೇಕು ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್, ಬೆಂಗಳೂರಿನ ಸ್ಪರ್ಧಾ ಅರಿವು ಅಕಾಡೆಮಿ ಹಾಗೂ ಶಿಕಾರಿಪುರದ ಸಾಧನಾ ಅಕಾಡೆಮಿ ಸಹಯೋಗದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕ-ಯುವತಿಯರಿಗಾಗಿ ಆಯೋಜಿಸಿರುವ ‘ಉದ್ಯೋಗ ಪಥ’ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಪದವಿ ಪಡೆದ ಎಲ್ಲರೂ ತಮ್ಮ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೇವಲ ಪಠ್ಯಕ್ರಮದ ಜ್ಞಾನ ಸಾಕಾಗುವುದಿಲ್ಲ. ಕಾಮನ್‌ಸೆನ್ಸ್, ಸೃಜನಶೀಲತೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ತಮ್ಮಲ್ಲಿರುವ ಪ್ರತಿಭೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನೋಭಾವ ಅಗತ್ಯ ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಯುವಕರು ಕೇವಲ ಪರೀಕ್ಷಾ ಜ್ಞಾನಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು ಹಾಗೂ ಸಮಾಜದ ಆಗುಹೋಗುಗಳ ಬಗ್ಗೆಯೂ ಅರಿವು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಯುವಕರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿರುವ ಡಾ. ಶರತ್ ಮರಿಯಪ್ಪ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು, ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಉದ್ಯೋಗದ ಜತೆಗೆ ಕೌಶಲ್ಯವೂ ಬೇಕು :
ಶಿಕ್ಷಣ ತಜ್ಞ ಹಾಗೂ ಆರ್ಯ ಪಿಯು ಕಾಲೇಜಿನ ಮುಖ್ಯಸ್ಥ ಎನ್. ರಮೇಶ್ ಮಾತನಾಡಿ, ಆರ್ಥಿಕವಾಗಿ ಸದೃಢರಾಗಲು ಉದ್ಯೋಗ ಅತ್ಯಗತ್ಯ. ಆದರೆ ಪ್ರಸ್ತುತ ದೇಶದಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಉದ್ಯೋಗಾವಕಾಶಗಳು ಸೀಮಿತವಾಗುತ್ತಿವೆ. ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉದ್ಯೋಗಾವಕಾಶಗಳು ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ. ನೂರು ಉದ್ಯೋಗಗಳಿಗೆ ಸಾವಿರಾರು ಮಂದಿ ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೃತಕ ಬುದ್ಧಿಮತ್ತೆ (ಎಐ) ವೇಗವಾಗಿ ಉದ್ಯೋಗ ಕ್ಷೇತ್ರವನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ ಕೇವಲ ಅಂಕಗಳಿಗೆ ಮಹತ್ವ ನೀಡದೆ ಅಂಕಗಳ ಜತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.

ಯುವಕರ ಕನಸು ನನಸು ಮಾಡುವ ಗುರಿ :

ಡಾ. ಶರತ್ ಮರಿಯಪ್ಪ ಫೌಂಡೇಷನ್ ಸಂಸ್ಥಾಪಕ ಹಾಗೂ ಯುವ ನಾಯಕ ಡಾ. ಶರತ್ ಮರಿಯಪ್ಪ ಮಾತನಾಡಿ, ಒಬ್ಬ ಯುವಕ ಸರ್ಕಾರಿ ಉದ್ಯೋಗ ಪಡೆದರೆ ಅದು ಕೇವಲ ಆತನ ವೈಯಕ್ತಿಕ ಆರ್ಥಿಕ ಬಲವಲ್ಲ; ಇಡೀ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ. ಆತನ ಯಶಸ್ಸು ಸ್ನೇಹಿತರು ಹಾಗೂ ಸುತ್ತಮುತ್ತಲಿನ ಇತರ ಯುವಕರಿಗೂ ಪ್ರೇರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಯುವಕರಿಗೆ ಉಚಿತ ತರಬೇತಿ ನೀಡುವ ಉದ್ದೇಶದಿಂದ ‘ಉದ್ಯೋಗ ಪಥ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಬಿಇಡ್ ವಿದ್ಯಾರ್ಥಿಗಳಿಗೂ ವಿಶೇಷ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ. ಸೆ.26ರಿಂದ 15 ದಿನಗಳ ಕಾಲ ತರಬೇತಿ ಆಯೋಜಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.

‘ಬೈ ಚಾನ್ಸ್’ ಅಲ್ಲ, ‘ಬೈ ಚಾಯ್ಸ್’ ಮುಖ್ಯ :

ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಜೀವನದಲ್ಲಿ ಅವಕಾಶಗಳು ಎದುರಾದಾಗ ‘ಬೈ ಚಾನ್ಸ್’ಗಿಂತ ‘ಬೈ ಚಾಯ್ಸ್’ ಮೂಲಕ ನಿರ್ಧಾರ ಕೈಗೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಇಂದಿನ ನಿರ್ಧಾರವೇ ಮುಂದಿನ ದಿನಗಳಲ್ಲಿ ನಾವು ಏನಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಮುಂದಿನ ವರ್ಷ, ಐದು ವರ್ಷ ಅಥವಾ 20 ವರ್ಷಗಳ ನಂತರ ನಮ್ಮನ್ನು ಯಾವ ಸ್ಥಾನದಲ್ಲಿ ನೋಡಿಕೊಳ್ಳಬೇಕು ಎಂಬ ಸ್ಪಷ್ಟ ಗುರಿಯೊಂದಿಗೆ ಪ್ರತಿಯೊಂದು ಆಯ್ಕೆಯನ್ನೂ ಮಾಡಿಕೊಳ್ಳಬೇಕು. ಯಾವುದೋ ಒಂದು ಕೆಲಸ ಸಿಕ್ಕಿತು ಎಂದು ಅದನ್ನು ಒಪ್ಪಿಕೊಳ್ಳುವುದಕ್ಕಿಂತ ನಮ್ಮ ಸಾಮರ್ಥ್ಯ ಮತ್ತು ಭವಿಷ್ಯಕ್ಕೆ ಸೂಕ್ತವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ತರಬೇತಿ ತಜ್ಞ ಶಂಕರ್ ಮಾತನಾಡಿ, ಭಾರತವನ್ನು ವಿಶ್ವದ ಯುವ ರಾಷ್ಟ್ರ ಎಂದು ಓದಿದ್ದೇವೆ, ಕೇಳಿದ್ದೇವೆ. ಆದರೆ ಶಿವಮೊಗ್ಗದ ಕುವೆಂಪು ಮೈದಾನದಲ್ಲಿ ಯುವಕರ ಉತ್ಸಾಹದ ಅಲೆಯನ್ನು ಕಣ್ಣಾರೆ ನೋಡುತ್ತಿದ್ದೇವೆ. ಸಮುದ್ರವಿಲ್ಲದ ಶಿವಮೊಗ್ಗದಲ್ಲಿ ಜೇಸಿ ಅಲೆಯನ್ನೇ ಎಬ್ಬಿಸುವಂತೆ ಡಾ. ಶರತ್ ಮರಿಯಪ್ಪ ಫೌಂಡೇಷನ್ ಯುವಶಕ್ತಿಯನ್ನು ಒಗ್ಗೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕೆ. ರಂಗನಾಥ್, ಜಿ.ಡಿ. ಮಂಜುನಾಥ್, ವಿನೋದ್ ಕೆ., ಪ್ರವೀಣ್ ಕುಮಾರ್, ರಾಜಶೇಖರ್, ಆಲ್ತಾಫ್ ಫರ್ವಿಜ್, ಕೇಶವ, ಹೆಚ್.ಪಿ. ಗಿರೀಶ್, ಕುಬೇಂದ್ರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಸ್ಪರ್ಧಾ ಅರಿವು ಅಕಾಡೆಮಿಯ ಪಿ.ವಿ. ಬೈರಪ್ಪ, ಪಿಎಸ್‌ಐ ಕಿಟ್ಟಿ ಸರ್, ಸವಿತಾ ಮೊದಲಾದವರು ಭಾಗವಹಿಸಿದ್ದರು.
ಕೋಟ್ಸ್‌
“ಉನ್ನತ ಪದವಿ ಪಡೆದ ಮಾತ್ರಕ್ಕೆ ಶಿಕ್ಷಣ ಪಡೆದಂತಲ್ಲ; ಪ್ರತಿಭೆಯನ್ನು ಗುರುತಿಸಿ, ಕೌಶಲ್ಯ ಬೆಳೆಸಿ, ಸಮಾಜದ ಅರಿವು ಮೂಡಿಸುವುದೇ ನಿಜವಾದ ಶಿಕ್ಷಣ.”
— ಆಯನೂರು ಮಂಜುನಾಥ್, ಮಾಜಿ ಸಂಸದರು
………………
“ಅಂಕಗಳು ಬಾಗಿಲು ತೆರೆಯಬಹುದು; ಆದರೆ ಕೌಶಲ್ಯ ಮತ್ತು ಪ್ರತಿಭೆಯೇ ಯಶಸ್ಸಿನ ದಾರಿ ತೋರಿಸುತ್ತವೆ. ಆ ಮೂಲಕ ಆರ್ಥಿಕವಾಗಿ ಸಧೃಡರಾಗಲು ಸಾಧ್ಯ”
— ಎನ್. ರಮೇಶ್, ಅರ್ಯ ವಿಜ್ಞಾನ ಕಾಲೇಜು ಸಂಸ್ಥಾಪಕರು
……………………
ಕೋಟ್ಸ್
“ಯುವಕರು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಿರಂತರ ಪರಿಶ್ರಮ ಹಾಗೂ ಸರಿಯಾದ ಮಾರ್ಗದರ್ಶನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾದರೆ ಯಶಸ್ಸು ಸಾಧಿಸಬಹುದು. ಯುವಕರ ಕನಸುಗಳನ್ನು ನನಸು ಮಾಡುವುದೇ ಫೌಂಡೇಷನ್‌ನ ಪ್ರಮುಖ ಧ್ಯೇಯ”
— ಡಾ. ಶರತ್ ಮರಿಯಪ್ಪ‌, ಫೌಂಡೇಷನ್‌ ಸಂಸ್ಥಾಪಕರು

ಬಾಕ್ಸ್‌
ಕಿಕ್ಕಿರಿದ ಕುವೆಂಪು ರಂಗಮಂದಿರ
ಶಿಕ್ಷಕರ ನೇಮಕಾತಿಯೂ ಸೇರಿದಂತೆ ಮುಂದಿನ ಸರಿ ಸುಮಾರು ೭೨ ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಪೂರಕವಾಗಿ ಡಾ. ಶರತ್‌ ಮರಿಯಪ್ಪ ಫೌಂಡೇಷನ್‌ ವತಿಯಿಂದ ಆಸಕ್ತ ಯುವಕ-ಯುವತಿಯರಿಗೆ ೨ ತಿಂಗಳ ಕಾಲ ಉಚಿತ ತರಬೇತಿ ನೀಡುತ್ತಿದ್ದು, ಇದರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಿಕ್ಕಿರಿದ ಕುವೆಂಪು ರಂಗಮಂದಿರ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಬೆಂಗಳೂರಿನ ಪಿಎಸ್‌ ಐ ಕಿಟ್ಟಿ ಸರ್‌, ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಸ್ಪರ್ಧಾ ಅರಿವು ಅಕಾಡೆಮಿಯ ಪಿ.ವಿ. ಬೈರಪ್ಪ ಮಾತುಗಳನ್ನು ಗಂಭೀರವಾಗಿ ಆಲಿಸಿದ ವಿದ್ಯಾರ್ಥಿಗಳು, ಹೆಚ್ಚಿನ ಮಾಹಿತಿ ಪಡೆದರು.

Leave a Reply

Your email address will not be published. Required fields are marked *