ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಸಾರ್ವಜನಿಕರೊಂದಿಗೆ ಸಿಎಂ ಸಂವಾದ ಸಭೆ
ಮಲೆನಾಡು ಜನರ ಹಿತಕಾಯಲು ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ – ಡಿ.ಕೆ. ಶಿವಕುಮಾರ್
ಶಿವಮೊಗ್ಗ, ಸೆ. ೧೯ (ಕರ್ನಾಟಕ ವಾರ್ತೆ): ಕಸ್ತೂರಿ ರಂಗನ್ ವರದಿಯಿಂದ ಬಾಧಿತರಾಗುವ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿ, ಸೆ. ೨೧ ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ, ಮಲೆನಾಡು ಭಾಗದ ಜನರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಶನಿವಾರ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಮತ್ತು ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ತಜ್ಞರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು, ಕಸ್ತೂರಿ ರಂಗನ್ ವರದಿಯ ಕುರಿತಂತೆ ಭೌತಿಕ ಸಮೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಜನರ ಸಮಸ್ಯೆಗಳನ್ನು ಅವರ ಅಭಿಪ್ರಾಯವನ್ನು ತಿಳಿದು ಕೊಂಡಿದ್ದೇನೆ. ಈ ಬಗ್ಗೆ ಸೆ. ೨೧ ರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದ್ದೇನೆ. ವಿಧಾನಮಂಡಲದ ಎರಡೂ ಸದನದಲ್ಲಿ ಜನಪ್ರತಿನಿಧಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿ, ಮಲೆನಾಡಿನ ಕಾಡಂಚಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ನಮ್ಮ ಸರ್ಕಾರದಿಂದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ ಎಂದರು.
ನಿಮ್ಮನ್ನು ಭೇಟಿ ಮಾಡಲು ಇದೊಂದು ಅವಕಾಶ. ರೈತರಿಗೆ ಒದಗಿರುವ ಅಪಾಯ ಎದುರಿಸುವ ಬಗೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಇಲ್ಲಿ ಸೇರಿದ್ದೇವೆ. ಏನೇ ಆದರೂ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು. ನಮಗೂ, ಭೂಮಿ ಮತ್ತು ಪರಿಸರಕ್ಕೆ ನಂಟಿದೆ. ನಿಮ್ಮ ಮನೆ ಬಾಗಿಲಿಗೆ ಬಂದು ಚರ್ಚಿಸಿ ನಂತರ ವಿಶೇಷ ಅಧಿವೇಶನ ನಡೆಸಿ ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು.
ಭಾವನೆಗಳ ಮೇಲೆ ರಾಜಕಾರಣ ಮಾಡಲಾಗುವುದಿಲ್ಲ, ಜನರ ಬದುಕು ಮುಖ್ಯ. ಜನರ ಸಮಸ್ಯೆಗಳಿಗೆ ಪರಿಹಾರ ಬೇಕು. ಇದೇ ಉದ್ದೇಶದಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ತಿಂಗಳಿಗೆ ಎರಡು ಬಾರಿ ಉಸ್ತುವಾರಿ ಸಚಿವರು, ಅಧಿಕಾರಿಗಳು ತಾಲ್ಲೂಕು, ಹೋಬಳಿ, ಪಂಚಾಯ್ತಿ ಮಟ್ಟಕ್ಕೆ ಹೋಗಿ ಜನರ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸಲು ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗಿದೆ.
ರೈತರು ಪರಿಸರವನ್ನು ಕಾಪಾಡಿಕೊಂಡು ಬಂದಿದ್ದೀರಿ. ನೀವು ವಲಸೆ ಹೋಗಬಾರದು. ಆದ್ದರಿಂದ ಕರಾವಳಿ ಪ್ರದೇಶ ೩೬೪ ಕಿ.ಮೀ ನೊಂದಿಗೆ ಮಲೆನಾಡ ಪ್ರದೇಶವನ್ನೂ ಸೇರಿಸಿ ಹೊಸ ಇಕೋ ಟೂರಿಸಂ ಕುರಿತು ಪ್ರವಾಸೋದ್ಯಮ ನೀತಿ ತರಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸೂಕ್ತ ಯೋಜನೆಗಳನ್ನು ರೂಪಿಸುತ್ತೇವೆ. ನಮ್ಮ ಸರ್ಕಾರ ಮಲೆನಾಡು ಜನರ ಪರವಾಗಿದೆ. ಅರಣ್ಯ ಭಾಗದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದವರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬಗರ್ ಹುಕುಂ, ಉಳುವವನಿಗೆ ಭೂಮಿ ಹಕ್ಕು ತಂದಿದ್ದು ನಮ್ಮ ಪಕ್ಷದ ಸರ್ಕಾರ. ಅಡಿಕೆ ತೆರಿಗೆ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕ ಪ್ರಸ್ತಾವನೆ ಸಲ್ಲಿಸುತ್ತೇವೆ. ೯೪ ಸಿ ವಿಷಯ ಚರ್ಚೆ ಕುರಿತಂತೆ ಪ್ರತ್ಯೇಕ ಸಭೆ ಕರೆಯುತ್ತೇನೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ರದ್ದುಪಡಿಸುವ ಬಗ್ಗೆ ಕಾನೂನಿನ ವ್ಯಾಪ್ತಿಯನ್ನು ಪರಿಶೀಲಿಸಲಾಗುವುದು ಎಂದ ಅವರು
ಅಕ್ರಮ ಸಕ್ರಮ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ಬಡವರಿಗೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಝೋನಲ್ ಮ್ಯಾನೇಜ್ಮೆಂಟ್ ಪ್ಲಾಂಟೇಷನ್ ಮಾಡಲು, ಸಂಜೀವ್ ಕುಮಾರ್ ವರದಿ ಬಗ್ಗೆ, ಸಂವಿಧಾನದ ೩೭೧ ವಿಶೇಷ ಸ್ಥಾನ ನೀಡುವ ಬಗ್ಗೆ ಸಲಹೆಗಳು ಬಂದಿದ್ದು ಚರ್ಚಿಸುತ್ತೇನೆ. ಹೊಸ ನೋಟಿಸ್ ಯಾವ ರೈತನಿಗೆ ಕೊಡಬಾರದು ಮತ್ತು ಹೊಸ ಒತ್ತುವರಿಗೂ ಅವಕಾಶ ನೀಡಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ತೇಗದ ಸಿರಿ ಯೋಜನೆ: ಸರ್ಕಾರಿ ಜಾಗದಲ್ಲಿ ರೈತರು ತೇಗ ಬೆಳೆಯಲು ಅವಕಾಶ ಕಲ್ಪಿಸಲಾಗುವುದು. ಈ ರೀತಿ ಬೆಳೆದ ತೇಗದಲ್ಲಿ ಶೇ. ೭೦ ರಷ್ಟು ಆದಾಯ ರೈತರಿಗೆ ಹಾಗೂ, ಶೇ.೩೦ ಸರ್ಕಾರಕ್ಕೆ ಎಂಬ ಅಂಶಗಳನ್ನೊಳಗೊಂಡಂತೆ “ತೇಗದ ಸಿರಿ” ಎಂಬ ಹೊಸ ಯೋಜನೆ ರೂಪಿಸಲಾಗುತ್ತಿದೆ. ಈ ರೀತಿ ಜನರ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಮಾತನಾಡಿ, ಮಲೆನಾಡು ಭಾಗದ ಜನರ ಆತಂಕ ನಿವಾರಿಸುವ ಕೆಲಸವನ್ನು ಮಾಡುತ್ತೇವೆಂದು ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಭರವಸೆ ನೀಡಿದ್ದಾರೆ. ಮನೆ, ಭೂಮಿ ಹೊಂದಿರುವ ಅರಣ್ಯವಾಸಿಗಳಿಗೆ ತೊಂದರೆ ಕೊಡುತ್ತಿರುವ ಕೇಂದ್ರದ ನಿಲುವನ್ನು ಧಿಕ್ಕರಿಸಬೇಕಿದೆ. ಗುಟ್ಕಾದಿಂದಲ್ಲ ಬದಲಾಗಿ ಕೇಂದ್ರದ ಸೇಲ್ಸ್ ತೆರಿಗೆಯಿಂದ ತೊಂದರೆಯಾಗಿದೆ. ೧೯೯೦ ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ನೀಡಿದ ಉಚಿತ ವಿದ್ಯುತ್ ನಿಂದ ೧.೪೮ ಲಕ್ಷ ಜನರು ೧೪ ಸಾವಿರ ಹೆ. ನಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಈಗಿನ ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ. ನಮ್ಮ ಹಕ್ಕುಗಳ ರಕ್ಷಣೆಗಾಗಿ ನಮ್ಮ ಊರಿಗೆ ಬಂದಿದ್ದಾರೆ. ರೈತರಿಂದ ಪರಿಸರ ಉಳಿದಿದೆ ಎಂದ ಅವರು ಇತ್ತೀಚೆಗೆ ತೀರ್ಥಹಳ್ಳಿ ಹೊರವಲಯದಲ್ಲಿ ಮಣ್ಣು ಕುಸಿತದಿಂದ ಮರಣ ಹೊಂದಿದ ಮೂರು ಜನರ ಮತ್ತು ಅವರ ಅವಲಂಬಿತರಿಗೆ ನಿವೇಶನ ಕೊಡಿಸಲು ಮತ್ತು ವಿಶೇಷ ಆರ್ಥಿಕ ನೆರವಿಗೆ ಮನವಿ ಮಾಡಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗರೆಡ್ಡಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ. ಅದನ್ನು ತಿರಸ್ಕರಿಸಲು ನಾವು ನಿರ್ಧರಿಸಿದ್ದೇವೆ. ಪ್ರಾಣಿ-ಮಾನವ ಸಂಘರ್ಷ ಸೇರಿದಂತೆ ಅರಣ್ಯ ವಿಷಯಗಳ ಕುರಿತು ಇಲ್ಲೇ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ಅಧಿಸೂಚನೆಯಾಗಬೇಕಿದೆ. ಜನ, ಅರಣ್ಯ, ವನಮೂಲ, ಪ್ರಾಣಿ ಸಂಕುಲ ಎಲ್ಲ ಉಳಿಯಬೇಕು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಸಾರ್ವಜನಿಕರ ಪರವಾಗಿರಲಿದೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕಿನ ಗ್ರಾಮಗಳು ಸೇರಿದಂತೆ ೪೦೦ ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಒಳಪಟ್ಟಿದ್ದು, ಆಕ್ಷೇಪಣೆ ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಜನರ ಹಿತ ಕಾಪಾಡುವ ಜವಾಬ್ದಾರಿ ಕೇಂದ್ರ, ರಾಜ್ಯ ಸರ್ಕಾರಗಳ ಮೇಲಿದೆ. ಹಿಂದೆಯೂ ಅಧಿಸೂಚನೆಗಳಿಗೆ ಈ ಹಿಂದಿನ ಮುಖ್ಯಮಂತ್ರಿಗಳು ಸರಿಯಾದ ಉತ್ತರ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿ ಅಪ್ರಸ್ತುತ ಎಂದು ತಿಳಿಸಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಲೇ ಬರಲಾಗಿದೆ. ಪ್ರಸ್ತುತ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮಲೆನಾಡಿನಲ್ಲಿ ಭೌತಿಕ ಸರ್ವೇ ಆಗಬೇಕು. ಒಟ್ಟಾಗಿ, ಒಂದಾಗಿ ವರದಿ ವಿರುದ್ದ ಹೋರಾಟ ಮಾಡೋಣ, ಸರಿಯಾದ ದಾಖಲಾತಿಗಳನ್ನು ಕೇಂದ್ರಕ್ಕೆ ನೀಡಿ ಮನವರಿಕೆ ಮಾಡೋಣ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅರಣ್ಯ ಅಧಿಸೂಚನೆಗಳು ಸಾಕಷ್ಟು ಬಾಧೆ ನೀಡುತ್ತಿವೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳಲ್ಲಿ ವಿದೇಶಿ ಕೈವಾಡ ಇರುವ ಬಗ್ಗೆ ಮಾತುಗಳಿದ್ದು ಈ ಬಗ್ಗೆ ವಿಸ್ತೃತ ಪರಿಶೀಲನೆ ಆಗಬೇಕಿದೆ. ಬಗರ್ ಹುಕುಂ ಹಕ್ಕು ಪತ್ರ ಪಡೆದಿದ್ದು ಇದನ್ನು ರದ್ದುಪಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಶರಾವತಿ ಮುಳುಗಡೆಗೆ ಪರಿಹಾರ ನೀಡಬೇಕಿದೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಜಾರಿಯಾಗದಿದ್ದರೂ ಅರಣ್ಯ ಇಲಾಖೆ ಸೂಕ್ಷ್ಮ ಪ್ರದೇಶದಂತೆ ನೋಡುತ್ತದೆ. ವರದಿಯಿಂದ ಎದುರಾಗುವ ಸಮಸ್ಯೆಗಳು, ಬದುಕನ್ನು ಕಸಿಯುವ ಪ್ರಯತ್ನಕ್ಕೆ ಶಾಶ್ವತ ಪರಿಹಾರ ನೀಡಬೇಕು. ಶೇ.೭೦ ಅಡಿಕೆ ಬೆಳೆಗಾರರು ಇಲ್ಲಿದ್ದು, ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕು. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇಕೋ ಟೂರಿಸಂ ಗೆ ಅವಕಾಶ ಮಾಡಿಕೊಡಬೇಕು. ನಗರದ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿದ್ದು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ಯನ್ನು ಮಂಜೂರು ಮಾಡಬೇಕೆಂದು ಮನವಿ ಮಡಿದರು.
ಆರ್ ಎಂ.ಮAಜುನಾಥ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತು ೭ ನೇ ಬಾರಿ ಕರಡು ಅಧಿಸೂಚನೆ ನೀಡಿದೆ. ನೂರಾರು ವರ್ಷದಿಂದ ಬದುಕುತ್ತಿರುವವರಿಗೆ ವರದಿ ಅನ್ಯಾಯ ಮಾಡುತ್ತಿದೆ. ಶರಾವತಿ ಸಂತ್ರಸ್ತರಿಗೆ, ಮಾಣಿ ಸಂತ್ರಸ್ತರಿಗೆ ನ್ಯಾಯ ಒದಗಿಲ್ಲ. ಇದಕ್ಕೆಲ್ಲ ಮುಖ್ಯಮಂತ್ರಿಗಳು ವಿಶೇಷ ಗಮನ ಕೊಡಬೇಕೆಂದು ಮನವಿ ಮಾಡಿದರು.
ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಇಲ್ಲಿನ ಜನರ ಮಾರಣ ಹೋಮ ಆಗಲಿದೆ. ಇದನ್ನು ತಡೆಯಲು ಪಾದಯಾತ್ರೆ ಕೈಗೊಳ್ಳಲಾಯಿತು. ಮಲೆನಾಡಿನ ಜನ ಅನೇಕ ಸವಾಲು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಹಂದಿ, ಆನೆ, ಮಂಗಗಳ ಕಾಟಕ್ಕೆ ಜನ ಊರು ಬಿಡುವ ಮಟ್ಟಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿ ೪೪೦ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಗಾಗಿರುವುದು ಶೋಚನೀಯ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ವೇ ಮಾಡಿ ಸುಪ್ರೀಂ ಕೋರ್ಟ್ ಗೆ ಕಳುಹಿಸಲಾಗಿದೆ. ಸಮರ್ಪಕ ನ್ಯಾಯ ಒದಗಬೇಕಿದೆ ಎಂದರು.
ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ರಾಜ್ಯದ ೧೦ ಜಿಲ್ಲೆಯ ವ್ಯಾಪ್ತಿಯ ಸುಮಾರು ೪೫೭೬ ಗ್ರಾಮಗಳಿಗೆ ತೊಂದರೆಯಾಗಲಿದೆ. ಇದು ಜಾರಿಯಾದರೆ ಇಲ್ಲಿನ ಜನ ಜೀವನ ದುಸ್ತರವಾಗುತ್ತದೆ. ಮುಖ್ಯಮಂತ್ರಿಗಳು ಗಂಭೀರ ಆಲೋಚನೆ ಮಾಡಿ, ಶಾಶ್ವತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಹೋರಾಟಗಳು ನಡೆದಿದ್ದು, ಕಸ್ತೂರಿ ರಂಗನ್ ವರದಿ ಕುರಿತು ಉತ್ತಮ ನ್ಯಾಯ ಒದಗಲಿದೆ ಎಂಬ ಭರವಸೆ ಇದೆ. ಶರಾವತಿ ಮುಳುಗಡೆಯಿಂದ ಈಗಾಗಲೇ ಸಂಕಟದಲ್ಲಿರುವವರಿಗೇ ಕಸ್ತೂರಿ ರಂಗನ್ ವರದಿ ತೂಗುಗತ್ತಿ ಎದುರಾಗಿದ್ದು, ಈ ಸಂಬAಧ ಒಳ್ಳೆಯ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮಾತನಾಡಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತೇವೆ ಎಂದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ, ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗ ರೆಡ್ಡಿ, ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಎಸ್ ಎನ್ ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ರಾಜ್ಯ ಜವಳಿ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ.ಮAಜುನಾಥ ಗೌಡ, ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ .ಸಿ . ಯೋಗೀಶ್ , ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ.ಸಿಇಓ, ಹೇಮಂತ್, ಎಸ್ ಪಿ ನಿಖಿಲ್, ವಿವಿಧ ಅಧಿಕಾರಿಗಳು, ಮಲೆನಾಡು ಭಾಗದ ಜನಪ್ರತಿನಿಧಿಗಳು, ರೈತ ಸಂಘಟನೆಗಳ ಒಕ್ಕೂಟದ ಪ್ರಮುಖರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.







