ತ್ಯಾವರೆಕೊಪ್ಪಫಲ್ಲಿ ಏಷ್ಯಾಟಿಕ್ ಸಿಂಹಿಣಿ ಸಾರಾ ಜನ್ಮ ನೀಡಿದ್ದ 4 ಮರಿಗಳು ಸಾವು
ಶಿವಮೊ: ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಏಷ್ಯಾಟಿಕ್ ಸಿಂಹಿಣಿ ಸಾರಾ ಜನ್ಮ ನೀಡಿದ್ದ 4 ಸಿಂಹದ ಮರಿಗಳು ಮೃತಪಟ್ಟಿವೆ. ಸುಮಾರು 4 ದಿನಗಳ ಹಿಂದೆ ಮರಿಗಳು ಮೃತಪಟ್ಟಿದ್ದು, ಶನಿವಾರ ಈ ವಿಚಾರ ಬೆಳಕಿಗೆ ಬಂದಿದೆ.
ಸಿಂಹಧಾಮದಲ್ಲಿ 4 ಮರಿಗಳು ಸಾವು
ತ್ಯಾವರೆಕೊಪ್ಪ ಮೃಗಾಲಯದಲ್ಲಿ ಏಷ್ಯಾಟಿಕ್ ಸಿಂಹಗಳ ಸಂತಾನೋತ್ಪತ್ತಿಗೆ ಮಾಡಲಾಗಿದ್ದ ಪ್ರಯತ್ನದ ನಡುವೆ ಈ ಘಟನೆ ಸಂಭವಿಸಿದ್ದು, ಹಿನ್ನಡೆಯುಂಟುಮಾಡಿದೆ. ಅಳಿವಿನಂಚಿನ ಪ್ರಭೇದಗಳ ಪಟ್ಟಿಯಲ್ಲಿರುವ ಏಷ್ಯಾಟಿಕ್ ಸಿಂಹಗಳ ಸಂತತಿ ವೃದ್ಧಿಯ ಉದ್ದೇಶದಿಂದ ಕಳೆದ ವರ್ಷ ಮಧ್ಯಪ್ರದೇಶದ ಇಂದೋರ್ನಿಂದ ಏಷ್ಯಾಟಿಕ್ ಸಿಂಹ ಶಿವ ಹಾಗೂ 5 ವರ್ಷದ ಸಿಂಹಿಣಿ ಸಾರಾ ಅವರನ್ನು ಶಿವಮೊಗ್ಗಕ್ಕೆ ತರಲಾಗಿತ್ತು. ಇದೇ ವೇಳೆ ಮೂರು ಹುಲಿಗಳನ್ನೂ ಇಂದೋರ್ನಿಂದ ಇಲ್ಲಿಗೆ ತರಲಾಗಿತ್ತು.
ಸಂತಾನೋತ್ಪತ್ತಿ ಉದ್ದೇಶದಿಂದ ಕರೆತರಲಾಗಿದ್ದ ಸಾರಾ ತ್ಯಾವರೆಕೊಪ್ಪದಲ್ಲಿ 4 ಮರಿಗಳಿಗೆ ಜನ್ಮ ನೀಡಿತ್ತು. ಶಿವಮೊಗ್ಗದಲ್ಲಿ ಏಷ್ಯಾಟಿಕ್ ಸಿಂಹಕ್ಕೆ ಮರಿಗಳು ಜನಿಸಿರುವುದು ಇದೇ ಮೊದಲ ಬಾರಿಯಾಗಿದ್ದರಿಂದ ಮೃಗಾಲಯದಲ್ಲಿ ಈ ಸಿಂಹಗಳ ಸಂತತಿ ವೃದ್ಧಿಯ ನಿರೀಕ್ಷೆ ಗರಿಗೆದರಿತ್ತು. ಆದರೆ, ಜನಿಸಿದ ನಾಲ್ಕೂ ಮರಿಗಳು ಬದುಕುಳಿಯಲಿಲ್ಲ.
ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಅಧಿಕಾರಿಗಳು, ಸಾರಾಗೆ ಇದು ಮೊದಲ ಗರ್ಭಧಾರಣೆಯಾಗಿದ್ದರಿಂದ ಮರಿಗಳ ಲಾಲನೆ ಪಾಲನೆಯ ಅರಿವು ಇರಲಿಲ್ಲ ಎಂದು ತಿಳಿಸಿದ್ದಾರೆ. ಹುಟ್ಟಿದ ಮರಿಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಹಾಗೂ ಅವುಗಳಿಗೆ ಹೇಗೆ ಹಾಲುಣಿಸಬೇಕು ಎಂಬ ತಾಯ್ತನದ ಅನುಭವದ ಕೊರತೆಯಿಂದಾಗಿ ಮರಿಗಳು ಮೃತಪಟ್ಟಿವೆ ಎಂದು ಸ್ಪಷ್ಟಪಡಿಸಿದ್ದಾರೆ.

