ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಕೃತಿಗೆ ವಿರುದ್ಧವಾದುದು

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಕೃತಿಗೆ ವಿರುದ್ಧವಾದುದು

ಶಿವಮೊಗ್ಗ :ಶರಾವತಿ ಪಂಪ್ಡ್ ಸ್ಟೋರೇಜ್ ಆಗಬಾರದು. ಪ್ರಕೃತಿಗೆ ವಿರುದ್ಧವಾದ ಕಾರ್ಯವಾಗಿರುವುದರಿಂದ ಇದನ್ನು ವಿರೋಧಿಸುತ್ತಿರುವುದಾಗಿ ಬಂಗಾರಮಕ್ಕಿಯ ಮಾರುತಿ ಗುರೂಜಿ ಹೇಳಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಹಾಗೂ ವಿವಿಧ ಪರಿಸರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆರಂಭವಾದ ಅಹೋರಾತ್ರಿ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.

ಜೀವ ಸಂಕುಲಕ್ಕೆ ಕುತ್ತು ತರುವ ಯೋಜನೆ ಜಾರಿಗೆ ವಿರೋಧವಿದೆ. ಮೂಕ ಪ್ರಾಣಿಗಳ ಧ್ವನಿಗೆ ನಾವು ಧ್ವನಿಗೂಡಿಸಬೇಕು. ಶರಾವತಿಗೆ ಈಗಾಗಲೇ ೭ ಡ್ಯಾಂ ಕಟ್ಟಲಾಗಿದೆ. ಈ ಪಂಪ್ಡ್ ಸ್ಟೋರೇಜ್ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಸಮುದ್ರಕ್ಕೆ ಸೇರುವ ನದಿ ನೀರನ್ನು ತಿರುಗಿ ಪೂರ್ವ ದಿಕ್ಕಿಗೆ ನದಿಯ ನೀರನ್ನ ಹರಿಸಲಾಗುತ್ತಿದೆ. ಇದು ಪ್ರಕೃತಿ ವಿರೋಧವಾಗಿದೆ. ಬೇಗೋಡಿ ಬಳಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ನೀರನ್ನು ವಿರುದ್ಧ ದಿಕ್ಕಿನಲ್ಲಿ ಹರಿಸಲಾಗುತ್ತದೆ. ಸುರಂಗ ಮಾತ್ರ ಮಾಡಲಾಗುತ್ತದೆ ಎಂದಿದ್ದಾರೆ. ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗಿದೆ ಎಂದರು.

ಇಚ್ಛಾಶಕ್ತಿ, ಜ್ಞಾನಶಕ್ತಿ ರಾಜಶಕ್ತಿಯ ಕೊರತೆ ಇದೆ. ನಮ್ಮಲ್ಲಿಯೂ ಒಗ್ಗಟ್ಟಿನ ಮಂತ್ರ ಕಾಣುತ್ತಿಲ್ಲ. ಈ ಮೂರು ಶಕ್ತಿ ಒಂದಾಗಬೇಕು ಒಂದಾದರೆ ಎಂತಹ ಹೋರಾಟವೂ ವಿಫಲವಾಗುವುದಿಲ್ಲ ಎಂದ ಅವರು, ಜರ್ಮನಿಯಿಂದ ಹಣವನ್ನು ಸಾಲದ ರೂಪದಲ್ಲಿ ತಂದು ಯೋಜನೆ ಮಾಡಿ ಯಾಕೆ ಮಾಡುತ್ತೀರಿ. ಇದು ಈಗ ೧೦ ಸಾವಿರದಿಂದ ೧೫ ಸಾವಿರ ಕೋಟಿಗೆ ಏರಿಕೆಯಾಗಿದೆ. ಪರಿವೇಶನ ಪೋರ್ಟಲ್ ನಲ್ಲಿ ೧೬ ಸಾವಿರ ಮರಗಳಿಂದ ೫೦ ಸಾವಿರ ಮರಗಳ ನಾಶವಾಗಲಿದೆ. ಇದರ ಜೊತೆಗೆ ಬೆಂಗಳೂರಿಗೆ ಶರಾವತಿ ನೀರು ಹೊತ್ತೊಯ್ಯಲು ಯೋಜನೆ ರೂಪುಗೊಂಡಿದೆ. ಬೇಕಾದರೆ ಪರಿವೇಶಣ ಪ್ರಾಜೆಕ್ಟ್ ಪರಿಶೀಲಿಸಿ ನೋಡಿ ಎಂದರು
ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ಪಶ್ಚಿಮಘಟ್ಟಗಳನ್ನು ಸಂರಕ್ಷಿಸುವ ಜವಾಬ್ದಾರಿ ದೇಶದ ಎಲ್ಲಾ ನಾಗರೀಕರ ಮೇಲಿದೆ. ಪರಿಸರದ ಮೇಲೆ ಆಗುತ್ತಿರುವ ಅವ್ಯಾಹತ ದಾಳಿಯನ್ನು ತಡೆಯಬೇಕಾಗಿದೆ. ಪ್ರಜ್ಞೆ ಇರುವವರು ಪರಿಸರ ನಾಶಕ್ಕೆ ಮುಂದಾಗುವುದಿಲ್ಲ. ನನಗೆ ಪ್ರಜ್ಞೆ ಇರುವ ಸರ್ಕಾರ ಬೇಕಾಗಿದೆ. ಅದಕ್ಕಾಗಿ ನಾವು ಈ ಸರ್ಕಾರದ ನಿಲುವನ್ನು ವಿರೋಧಿಸಿ ಈ ಕಾರ್ಯಕ್ಕೆ ಬೆಂಬಲಿಸುತ್ತಿದ್ದೇ ಎಂದರು.
ಇನ್ನೋರ್ವ ಮಾಜಿ ಶಾಸಕ ಆಂದೋಲನದ ಮುಖಂಡ ಎ.ಟಿ.ರಾಮಸ್ವಾಮಿ ಮಾತನಾಡಿ, ೨೪ ಗಂಟೆಗಳ ಈ ಸತ್ಯಾಗ್ರಹ ಕೇವಲ ಸಾಂಕೇತಿಕ. ವಿಶ್ವದ ಎಂಟು ಪಾರಂಪರಿಕ ತಾಣಗಳಲ್ಲಿ ಪಶ್ಚಿಮ ಘಟ್ಟವು ಒಂದು ಎಂದು ಯುನೆಸ್ಕೋ ಹೇಳಿದೆ. ಇದನ್ನು ಸಂರಕ್ಷಿಸಲೇಬೇಕು. ಈ ಯೋಜನೆಯಿಂದ ೬೪ ಸಾವಿರ ಮರಗಳ ಮಾರಣಹೋಮ ಆಗಲಿದೆ. ಮತ್ತು ಸರ್ಕಾರದ ಅಧಿಕಾರಿಗಳ ಸಮೀಕ್ಷೆಯಂತೆ ಶೇ.೬೦ರಷ್ಟು ಭೂಕುಸಿತ ಉಂಟಾಗಲಿದೆ. ಪಶ್ಚಿಮಘಟ್ಟದ ಜನರ ಬದುಕು ಸರ್ವನಾಶವಾಗಲಿದೆ ಎಂದರು.

ಕೆ.ಎಸ್. ಈಶ್ವರಪ್ಪ ಮಾತನಾಡಿ, ಈಗಾಗಲೇ ಹಲವು ಸಲ ಮನವಿ ನೀಡಿದ್ದೇವೆ. ಇದಕ್ಕೊಂದು ಅಂತ್ಯ ಕಾಣಿಸುತ್ತೇವೆ. ಯಾವುದೇ ಕಾರಣಕ್ಕೂ ಯೋಜನೆಯಾಗಲು ಬಿಡುವುದಿಲ್ಲ. ರಾಜ್ಯದ ಜನ ಮತ್ತು ವಿವಿಧ ಸಂಘಟನೆಗಳು ನಮ್ಮಜೊತೆ ಕೈಜೋಡಿಸಿದ್ದಾರೆ ಎಂದರು.
ಕೆ.ಈ. ಕಾಂತೇಶ್ ಮಾತನಾಡಿ, ಯೋಜನೆಗೆ ಮುಖ್ಯ ಕಾರಣರಾದ ಸಿದ್ಧರಾಮಯ್ಯ ಮತ್ತು ಕೆ.ಜೆ. ಜಾರ್ಜ್ ಅವರನ್ನು ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಮಲೆನಾಡಿನ ಹೆಬ್ಬಾಗಿಲು ರಾಜಸ್ಥಾನ ಮರುಭೂಮಿಯಾಗುತ್ತದೆ. ಎಂದರು.
ಸತ್ಯಾಗ್ರಹದಲ್ಲಿ ಪ್ರಮುಖರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ, ಶ್ರೀಪತಿ, ಜನಾರ್ಧನ್ ಪೈ, ಎಸ್.ಬಿ.ಅಶೋಕ್ ಗಾಂಧಿ, ಶ್ರೀಕಾಂತ್, ನವ್ಯಶ್ರೀ ನಾಗೇಶ್, ಮೋಹನ ಜಾಧವ್, ಈ. ವಿಶ್ವಾಸ್, ದುಮ್ಮಳ್ಳಿ ಶಿವಮ್ಮ ಮತ್ತು ಹುಬ್ಬಳ್ಳಿಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಅಕ್ಕ ಫೌಂಡೇಷನ್ ಟ್ರಸ್ಟ್‌ನ ವೀರಪ್ಪ ಅರಕೇರಿ, ಕವಿತಾ ಎ.ಎಸ್., ವಿಜಯಲಕ್ಷ್ಮೀ, ಡಾ. ರಾಜಶೇಖರ್, ಡಾ.ಮಿಥಲಗಿ ಮೊದಲಾದವರಿದ್ದರು.

——————      —————————

ಮಾ.೨೯ರ ಭಾನುವಾರ ಬಂಗಾರಮಕ್ಕಿಯಲ್ಲಿ ಪಶ್ಚಿಮಘಟ್ಟದ ರಕ್ಷಣೆಗೆ ಜನಾಂದೋಲನ , ಸಹಿಸಂಗ್ರಹ, ಸಹ್ಯಾದ್ರಿ ಜ್ಞಾನ ಹಾಗೂ ಸಂರಕ್ಷಣಾ ಸಮಾವೇಶ ನಡೆಯಲಿದ್ದು, ಶರಾವತಿ ಪಂಪ್ಡ್ ಸ್ಟೋರೇಜ್ ಯೊಜನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಯೋಜನೆಯಾಗಲು ಬಿಡುವುದಿಲ್ಲ. ನನ್ನ ಹೆಣದ ಮೇಲೆ ಈ ಯೋಜನೆ ಆಗಬೇಕು ಎಂದು ಹಿಂದೆ ಹೇಳಿದ್ದೆ. ಈಗಲೂ ಅದೇ ಮಾತನ್ನು ಪುನರುಚ್ಛರಿಸುತ್ತೇನೆ .
ಮಾರುತಿ ಗುರೂಜಿ, ಬಂಗಾರಮಕ್ಕಿ

Leave a Reply

Your email address will not be published. Required fields are marked *