ಶಿವಮೊಗ್ಗ ಜೂ.೨೨: ಜನವರಿ ೨೦೨೬ರಿಂದ ಇದೂವರೆಗೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸುಮಾರು ೧೦೦೦ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು ಸೋಮವಾರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರಸುದಾರರಿಗೆ ಮರಳಿಸಲಾಯಿತು. ಇದೇ ವೇಳೆ ಠಾಣಾ ಆವರಣದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಸಂದರ್ಶಕರ ಕೊಠಡಿಯನ್ನು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಉದ್ಘಾಟಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಪಿ ನಿಖಿಲ್ , ರಾಜ್ಯ ಪೊಲೀಸ್ ಮಹಾ ನಿರ್ದೆಶಕರ ಆದೇಶದಂತೆ ಸಂದರ್ಶಕರ ಕೊಠಡಿಯನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಇದರಿಂದ ದೂರುದಾರರಿಗೆ ಅನುಕೂಲವಾಗಲಿದೆ ಎಂದರು.
ದೊಡ್ಡಪೇಟೆ ವ್ಯಾಪ್ತಿಯಲ್ಲಿ ಸುಮಾರು ೧೦೦ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಕಳೆದುಕೊಂಡವರು ಸಿಇಐಆರ್‌ಮನೆಯಿಂದಲೇ ದೂರು ದಾಖಲಿಸಬಹುದು. ಸಿಕ್ಕಿದಾಗ ಸಂಬಂಧಪಟ್ಟವರಿಗೆ ಠಾಣೆಯಿಂದ ಸಂದೇಶ ಬರುತ್ತದೆ. ಇದೊಂದು ದೊಡ್ಡ ಸಾಧನೆಯಾಗಿದೆ. ಸಾವಿರಾರು ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಿದೆ ಎಂದರು.
ಕುಂಸಿ ಠಾಣಾ ವ್ಯಾಪ್ತಿಯ ಸುತ್ತುಕೋಟೆಯಲ್ಲಿ ಮೂರು ದಿನಗಳ ಹಿಂದೆ ಪ್ರವೀಣ್ ಎಂಬ ಯುವಕನ ಕೊಲೆಯಾಗಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.
ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ. ಕೊಲೆಯ ಹಿಂದಿನ ಕಾರಣ ಕೂಡ ವಿವಿಧ ಕೋನಗಳಲ್ಲಿ ಪರಿಶೀಲನೆ ಮಾಡಿ ತನಿಖೆ ಮುಂದುವರಿಸಲಾಗಿದೆ. ಆರೋಪಿ ಪತ್ತೆಗೆ ಈಗಾಗಲೇ
ಎರಡು ತಂಡ ರಚನೆ ಮಾಡಿರುವುದಾಗಿ ವಿವರಿಸಿದರು.
ಪೊಲೀಸ್ ಉಪಾಧೀಕ್ಷಕ ಸಂಜೀವಕುಮಾರ್, ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.