ಅಪ್ಪನ ಸ್ವಯಾರ್ಜಿತ ಆಸ್ತಿ ಮಗನದ್ದು ಮಾತ್ರ, ಮೊಮ್ಮಕ್ಕಳಿಗೆ ಹಕ್ಕಿಲ್ಲ

ಅಪ್ಪನ ಸ್ವಯಾರ್ಜಿತ ಆಸ್ತಿ ಮಗನದ್ದು ಮಾತ್ರ, ಮೊಮ್ಮಕ್ಕಳಿಗೆ ಹಕ್ಕಿಲ್ಲ
ಶಿವಮೊಗ್ಗ : ಕೌಟುಂಬಿಕ ಆಸ್ತಿ ಹಂಚಿಕೆ ವಿಚಾರದಲ್ಲಿ ಇದೀಗ ಹೈಕೋರ್ಟ್ ಪ್ರಕರಣವೊಂದರ ನಿಮಿತ್ತ ನೀಡಿರುವ ತೀರ್ಪು ಸಂಚಲನ ಮೂಡಿಸುತ್ತಿದೆ. ಇದೇನು ನಿಂದಲ್ಲ, ನಮ್ಮ ತಾತಂದು, ಈ ಆಸ್ತಿಯಲ್ಲಿ ಮೊಮ್ಮಗನಿಗೂ ಹಕ್ಕಿದೆ ಅಂತಾ ಊರ ಕಾನೂನು ಮಾತನಾಡುತ್ತಿದ್ದವರಿಗೆ ಹೈಕೋರ್ಟ್ ತೀರ್ಪು ತಂದೆಯ ಆಸ್ತಿ ಮಗನಿಗೆ ಹಕ್ಕು, ಅದು ವೈಯಕ್ತಿಕ ಪಿತ್ರಾರ್ಜಿತ ಅಲ್ಲ ಎಂದಿದೆ.
ಪ್ರಮುಖಾಂಶ
ತಾತನು ತನ್ನ ಜೀವಿತಾವಧಿಯಲ್ಲಿ ಸ್ವಂತ ದುಡಿಮೆಯಿಂದ ಸಂಪಾದಿಸಿದ ಆಸ್ತಿಯು, ಆತನ ಮರಣದ ನಂತರ ಅಥವಾ ಕೌಟುಂಬಿಕ ವಿಭಜನೆಯ ನಂತರ ಆತನ ಮಗನಿಗೆ (ಅಂದರೆ ತಂದೆಗೆ) ಸೇರಿದರೆ, ಅದು ಆ ತಂದೆಯ ಸ್ವಂತ ಅಥವಾ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು, ಅದನ್ನು ‘ಹಿಂದೂ ಅವಿಭಕ್ತ ಕುಟುಂಬದ’ (HUF) ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಈ ರೀತಿ ತಂದೆಯ ಪಾಲಿಗೆ ಬಂದಿರುವ ವೈಯಕ್ತಿಕ ಆಸ್ತಿಯಲ್ಲಿ ಪಾಲು ಕೇಳಲು ಮೊಮ್ಮಕ್ಕಳಿಗೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠವು ಈ ಐತಿಹಾಸಿಕ ಆದೇಶವನ್ನು ಹೊರಡಿಸಿದೆ.
ಅರ್ಜಿದಾರರಾದ ಉಷಾ ಅವರು ಉಲ್ಲೇಖಿಸಿರುವ ವಿವಾದಿತ ಆಸ್ತಿಗಳನ್ನು ಆಕೆಯ ತಾತ, ಅಂದರೆ ಆಕೆಯ ತಂದೆಯ ತಂದೆ ತನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿದ್ದರು ಎಂಬುದು ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳಿಂದ ಸ್ಪಷ್ಟವಾಗಿ ಸಾಬೀತಾಗಿದೆ. ಈ ಆಸ್ತಿಯನ್ನು ಅವರ ತಾತ ಹಾಗೂ ಅವರ ಮಕ್ಕಳು ಪರಸ್ಪರ ಕೌಟುಂಬಿಕ ಒಪ್ಪಂದದ ಮೂಲಕ ಹಂಚಿಕೆ ಮಾಡಿಕೊಂಡಿದ್ದರು. ನ್ಯಾಯಾಲಯದ ಆದೇಶದ ಪ್ರಕಾರ, ತಾತನ ಸ್ವಯಾರ್ಜಿತ ಆಸ್ತಿಯು ಭಾಗವಾಗಿ ತಂದೆಯ ಪಾಲಿಗೆ ಬಂದಾಗ, ಅದು ಆ ತಂದೆಯ ಸಂಪೂರ್ಣ ವೈಯಕ್ತಿಕ ಆಸ್ತಿಯಾಗಿ ಬದಲಾಗುತ್ತದೆ. ಆದರೆ, ಅದನ್ನು ಹಿಂದೂ ಕಾಯ್ದೆಯಡಿ ಬರುವ ಪಿತ್ರಾರ್ಜಿತ ಅಥವಾ ಜಂಟಿ ಕುಟುಂಬದ ಆಸ್ತಿ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ. ಈ ತರ್ಕದ ಆಧಾರದ ಮೇಲೆ, ತಂದೆಗೆ ತನ್ನ ವೈಯಕ್ತಿಕ ಆಸ್ತಿಯನ್ನು ತನ್ನ ಇಚ್ಛೆಯಂತೆ ಯಾರಿಗಾದರೂ ವಿಲೇವಾರಿ ಮಾಡುವ, ಮಾರಾಟ ಮಾಡುವ ಅಥವಾ ದಾನ ನೀಡುವ ಸಂಪೂರ್ಣ ಕಾನೂನಾತ್ಮಕ ಹಕ್ಕಿರುತ್ತದೆ ಎಂದು ಕೋರ್ಟ್ ಹೇಳಿದೆ.

Leave a Reply

Your email address will not be published. Required fields are marked *