ಅಣು ವಿದ್ಯುತ್ ಸ್ಥಾವರ ಸ್ಥಾಪನೆ ತಕ್ಷಣ ಕೈಬಿಡಿ

ಅಣು ವಿದ್ಯುತ್ ಸ್ಥಾವರ ಸ್ಥಾಪನೆ ತಕ್ಷಣ ಕೈಬಿಡಿ

ಶಿವಮೊಗ್ಗ: ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿ ನಾಗರೀಕ ಹಕ್ಕುಗಳ ರಕ್ಷಣಾ ಸಂಘಟನೆ ( ಎಪಿಸಿಆರ್) ಜಿಲ್ಲಾ ಘಟಕ ವತಿಯಿಂದ ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿ ವ್ಯಾಪ್ತಿಯ ಬೇಸೂರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಾಖ ವಿದ್ಯುತ್ ನಿಗಮವು (NTPC) ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ನಡೆಸುತ್ತಿರುವ ತೆರೆಮರೆಯ ಸಿದ್ಧತೆಗಳು ಸ್ಥಳೀಯ ಜನರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ.

ಕಳೆದ ಜನವರಿ 31 ರಂದು NTPC ಈ ಬಗ್ಗೆ ರಾಜ್ಯಸರ್ಕಾರಕ್ಕೆ ಪತ್ರ ಬರೆದಿರುವುದು ಹಾಗು ಇತ್ತೀಚೆಗೆ ಬೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿರುವುದು ಈ ಆತಂಕಕ್ಕೆ ಪುಷ್ಠಿ ನೀಡಿದೆ. ಈ ಯೋಜನೆಯಡಿ ಸುಮಾರು 1,200 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು ಅದರಲ್ಲಿ 485 ಎಕರೆ ಗೋಮಾಳ ಮತ್ತು 900 ಎಕರೆಗೂ ಅಧಿಕ ದಟ್ಟ ಅರಣ್ಯ ಹಾಗೂ ಕಂದಾಯ ಭೂಮಿ ಒಳಗೊಂಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ಸರ್ವೆ ನಂಬರ್ 104, 94, 80, 82 ಸೇರಿದಂತೆ ಹತ್ತಾರು ಜಮೀನುಗಳ ವಿವರಗಳನ್ನು ತಾಲೂಕು ಆಡಳಿತವು ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಿರುವುದು ಯೋಜನೆ ಬಗೆಗೆ ಇನ್ನಷ್ಟು ಗುಮಾನಿಯನ್ನು ಎತ್ತಿ ತೋರಿಸುತ್ತಿದೆ.

ಈ ಭಾಗದ ಜನರು ದಶಕಗಳ ಹಿಂದೆ ಲಿಂಗನಮಕ್ಕಿ, ಚಕ್ರಾ, ಸಾವೆಹಕ್ಲು ಮತ್ತು ಮಾಣಿ ಅಣೆಕಟ್ಟುಗಳ ನಿರ್ಮಾಣದಿಂದಾಗಿ ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾದ ಕಹಿ ನೆನಪುಗಳನ್ನು ಹೊಂದಿದ್ದಾರೆ. ಅಂದು ಸಂತ್ರಸ್ತರಾದ ಸಾವಿರಾರು ಕುಟುಂಬಗಳಿಗೆ ಇಂದಿಗೂ ಸರಿಯಾದ ಪುನರ್ವಸತಿ ಅಥವಾ ತಾವು ವಾಸಿಸುತ್ತಿರುವ ಭೂಮಿಗೆ ಹಕ್ಕುಪತ್ರಗಳು ದೊರೆತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ ಹಾಗೂ ಶರಾವತಿ ಹಿನ್ನೀರಿನ ವ್ಯಾಪ್ತಿಯಲ್ಲಿ ಅಣು ಸ್ಥಾವರದಂತಹ ವಿನಾಶಕಾರಿ ಯೋಜನೆಯನ್ನು ತರುವುದು ಸ್ಥಳೀಯ ಜನರ ಬದುಕು ಮತ್ತು ಸಾವಿನ ಪ್ರಶ್ನೆಯಾಗಿ ಪರಿಣಮಿಸಿದೆ. ಅಧಿಕಾರಿಗಳು ಸ್ಥಳ ಲಭ್ಯತೆಯ ವರದಿಯನ್ನು ಈಗಾಗಲೇ ಸಲ್ಲಿಸಿದ್ದರೂ ಸಾರ್ವಜನಿಕರಿಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ಗೌಪ್ಯತೆ ಕಾಯ್ದುಕೊಳ್ಳುತ್ತಿರುವುದು ಜನರಲ್ಲಿ ಆಡಳಿತದ ವಿರುದ್ಧ ಅಸಮಾಧಾನ ಮೂಡಲು ಕಾರಣವಾಗಿದೆ.

ಚಕ್ರ ಸಾವೇ ಹಕ್ಕಲು ಡ್ಯಾಮ್ ಪಕ್ಕದಲ್ಲಿ ಮಡೆನೂರು ಡ್ಯಾಮ್ ಕೂಡ ಸೇರಿಸಿ, ಉದ್ದೇಶಿತ ಅಣುಸ್ಥಾವರ ಸ್ಥಾಪನೆ ಯಾದಲ್ಲಿ ಜೋಗ ಮತ್ತು ಮಡೆನೂರು ಡ್ಯಾಮ್ ನಿರ್ಮಾಣದಿಂದ ಮನೆಮಠ ಕಳೆದುಕೊಂಡು ಪುನರ್ವಸತಿ ಆಗದ ಸಾವಿರಾರು ಕುಟುಂಬಗಳಿಗೆ ಮತ್ತೆ ಬರೆ ಎಳೆದಂತಾಗುತ್ತದೆ. ಈ ಪ್ರದೇಶ ಕಾಯ್ದಿಟ್ಟ ಅರಣ್ಯ ಆಗಿರುವುದರಿಂದ ಇಲ್ಲಿ ವಾಸಿಸುವ ಲಕ್ಷಾಂತರ ಜಲಚರ ಪ್ರಾಣಿಗಳಿಗೆ, ಪಕ್ಷಿಗಳಿಗೆ, ಜನಜೀವನಕ್ಕೆ, ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಇತ್ತೀಚೆಗೆ ನಿರ್ಮಾಣವಾದ ಸಿಗಂದೂರು ಸೇತುವೆ ಮತ್ತು ಜೋಗ ಡ್ಯಾಮ್ ಗಳಿಗೂ ಈ ಅಣು ಸ್ಥಾವರ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಅಪಾಯವಾಗುವ ಸೂಚನೆಗಳಿವೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಇದರಿಂದ ತೊಂದರೆಯಾಗುತ್ತದೆ.

ಮಲೆನಾಡಿನ ಪರಿಸರ ಮತ್ತು ಜನರ ಹಿತದೃಷ್ಟಿಯಿಂದ ಸಾಗರ ತಾಲೂಕಿನಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸುತ್ತೇವೆ. ದಟ್ಟ ಅರಣ್ಯ ಮತ್ತು ಜೀವವೈವಿಧ್ಯವನ್ನು ನಾಶಮಾಡುವ ಹಾಗೂ ಜನವಸತಿ ಪ್ರದೇಶಕ್ಕೆ ಅಪಾಯಕಾರಿಯಾದ ಈ ಯೋಜನೆಯನ್ನು ನಾವು ಸಾರಾಸಗಟಾಗಿ ವಿರೋಧಿಸುತ್ತೇವೆ. ತಾವು ಕೂಡಲೇ ಜನಸಾಮಾನ್ಯರ ಆತಂಕವನ್ನು ದೂರಮಾಡಿ ಸರ್ಕಾರದ ಮಟ್ಟದಲ್ಲಿ ಈ ಯೋಜನೆಯನ್ನು ರದ್ದುಗೊಳಿಸಲು ಶಿಫಾರಸು ಮಾಡಬೇಕೆಂದು ಆಗ್ರಹಪೂರ್ವಕವಾಗಿ ವಿನಂತಿಸಲಾಗಿದೆ.

ಜಿಲ್ಲಾ ಗೌರವ ಅಧ್ಯಕ್ಷ ಆರ್.ಟಿ.ನಟರಾಜ್, ಜಿಲ್ಲಾಧ್ಯಕ್ಷೆ ಸರೋಜಾ ಪಿ.ಚಂಗೊಳ್ಳಿ, ವಿ . ರಾಜು ಮೊಹಮ್ಮದ್ ರಫೀ, ಎಸ್.ವಿ.ರಾಜಮ್ಮ . ಚನ್ನವೀರಪ್ಪ ಗಮನಗಟ್ಟಿ ಮತ್ತಿತರರು  ಉಪಸ್ಥಿತರಿದ್ದರು

Leave a Reply

Your email address will not be published. Required fields are marked *