ಭೀಕರ ರಸ್ತೆ ಅಪಘಾತ : ಶಿವಮೊಗ್ಗದ ಶಂಕರಘಟ್ಟದ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸ, ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಉಡುಪಿ, ಏ.29: ಬೇಸಿಗೆ ರಜೆಯಲ್ಲಿ ಊರೆಲ್ಲ ಸುತ್ತುವ ಎಂದು ಕರಾವಳಿ ಕಡೆ ಪ್ರವಾಸ ಕೈಗೊಂಡಿದ್ದ ವಿದ್ಯಾರ್ಥಿಗೆ ಯಮನ ದರ್ಶನವಾಗಿದೆ, ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಬೀಚ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ಬಸ್ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್​​​ಗೆ ಮೊದಲು ಡಿಕ್ಕಿ ಹೊಡೆದು ನಂತರ ಟ್ರಕ್​​​ಗೆ  ಅತಿ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಮೊಗ್ಗದ ಶಂಕರಘಟ್ಟದ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಮುರುಡೇಶ್ವರ ದರ್ಶನ ಮುಗಿಸಿ ಉಡುಪಿಯತ್ತ ಪ್ರಯಾಣಿಸುತ್ತಿದ್ದ ವೇಳೆ, ತ್ರಾಸಿ ಬೀಚ್ ಸಮೀಪದ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿದ್ದ ಟ್ಯಾಂಕರ್​​​ಗೆ ಡಿಕ್ಕಿ ಹೊಡೆದು ನಂತರ ಟ್ರಕ್​​ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಬಸ್ಸಿನಲ್ಲಿ ಒಟ್ಟು 47 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಲವು ವಿದ್ಯಾರ್ಥಿಗಳನ್ನು ಕುಂದಾಪುರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *