ಜೀವಾವಧಿ ಶಿಕ್ಷೆ ಕೈದಿ ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಶಿಫ್ಟ್
ಬೆಂಗಳೂರು: ಜೀವಾವಧಿ ಶಿಕ್ಷೆಗೊಳಗಾದ ಕೈದಿ ಪ್ರಜ್ವಲ್ ರೇವಣ್ಣ ಅವರನ್ನ ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ದಿಢೀರ್ ನಿರ್ಧಾರಕ್ಕೆ ಇತ್ತೀಚೆಗೆ ಜೈಲಿನಲ್ಲಿ ನಡೆಸ ಅಕ್ರಮ ಚಟುವಟಿಕೆಗಳೇ ಕಾರಣ ಎನ್ನಲಾಗಿದೆ.
ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ ಡಿಜಿಪಿ ಅಲೋಕ್ಕುಮಾರ್ ಅವರು ಪ್ರಜ್ವಲ್ ವರ್ಗಾವಣೆ ಬಗ್ಗೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಮೇಲೆ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ಪರಿಶೀಲನೆ ವೇಳೆ ಸ್ಮಾರ್ಟ್‌ಫೋನ್, ಚಾರ್ಜರ್, ಆಂಧ್ರಪ್ರದೇಶ ಮೂಲದ ಸಿಮ್ ಕಾರ್ಡ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು. ಜೈಲಿನಲ್ಲಿದ್ದೇ ಅವರು ಹೊರಗಿನ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನುವ ದೃಶ್ಯಗಳು ಹಾಗೂ ಮಾಹಿತಿ ಬಹಿರಂಗವಾಗಿ ಭಾರಿ ಕೋಲಾಹಲ ಸೃಷ್ಟಿಸಿತ್ತು.
ಘಟನೆ ಬಳಿಕ ಮೊದಲ ಹಂತವಾಗಿ ಪ್ರಜ್ವಲ್ ರೇವಣ್ಣ ಅವರಿಗಿದ್ದ ಪ್ರತ್ಯೇಕ ಸೆಲ್ ಸೌಲಭ್ಯವನ್ನು ರದ್ದುಗೊಳಿಸಿ, ಸಿಸಿಟಿವಿ ಕಣ್ಗಾವಲಿರುವ ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಸ್ಥಳಾಂತರಿಸಲಾಯಿತು. ಆದರೆ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಪ್ರಭಾವ ಬಳಸಿ ಮತ್ತೆ ಅಕ್ರಮ ಚಟುವಟಿಕೆಗಳು ಮುಂದುವರಿಯುವ ಆತಂಕ ಹಾಗೂ ಭದ್ರತಾ ಕಾರಣಗಳಿಂದಾಗಿ, ಅವರನ್ನು ಕಠಿಣ ನಿಯಮಾವಳಿಗಳುಳ್ಳ ದೂರದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲು ಕಾರಾಗೃಹ ಇಲಾಖೆ ಹಾಗೂ ಗೃಹ ಇಲಾಖೆ ಮುಂದಾಗಿದೆ.

