|
|
|
|||
|
|
||||
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ 51 ಸದಸ್ಯರ ತಂಡ ಹಿಮಾಲಯ ಟ್ರೆಕ್ಕಿಂಗ್ ಅಭಿಯಾನಕ್ಕೆ ಪ್ರಯಾಣ
ನವದೆಹಲಿ:
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ 51 ಸದಸ್ಯರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಮಾರ್ಗದರ್ಶಕರ ತಂಡವು ಮಂಗಳವಾರ ಹಿಮಾಚಲ ಪ್ರದೇಶದ ಕುಲು ಮಂಡಲದಲ್ಲಿರುವ ರಾವೋರಿ ಖೋಲಿ (12,000 ಅಡಿ) ಪ್ರದೇಶದಲ್ಲಿ ನಡೆಯಲಿರುವ ಸಾಹಸಮಯ ಹಿಮಾಲಯ ಟ್ರೆಕ್ಕಿಂಗ್ ಅಭಿಯಾನಕ್ಕಾಗಿ ಪ್ರಯಾಣ ಬೆಳೆಸಿತು.
ಈ ಅಭಿಯಾನವನ್ನು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ವೈ.ಹೆಚ್.ಏ.ಐ. ಗೀರ್ವಾಣಭಾರತಿ ಶ್ರೀ ಆದಿಚುಂಚನಗಿರಿ ಸಂಸ್ಕೃತ ಭಾರತಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಶಿವಮೊಗ್ಗ, ಶಿವಮೊಗ್ಗದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಹಾಗೂ ಇತರೆ ಸಹಯೋಗಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರ್ಖೇಡಿ ಅವರು ತಂಡಕ್ಕೆ ಹಸಿರು ನಿಶಾನೆ ತೋರಿಸಿ ಶುಭಯಾತ್ರೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ವಿಶಿಷ್ಟ ಸಾಹಸ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಹಿಮಾಲಯದ ಮಡಿಲಿನಲ್ಲಿ ನಡೆಯುವ ಈ ಯಾತ್ರೆ ವಿದ್ಯಾರ್ಥಿಗಳಿಗೆ ಪ್ರಕೃತಿ, ಸಂಸ್ಕೃತಿ ಹಾಗೂ ಭಾರತೀಯ ಜೀವನದರ್ಶನವನ್ನು ಸಮೀಪದಿಂದ ಅನುಭವಿಸುವ ಅಪೂರ್ವ ಅವಕಾಶವನ್ನು ಒದಗಿಸುತ್ತದೆ ಎಂದರು.
ಉನ್ನತ ಹಿಮಾಲಯ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯ ನಿರ್ಮಿತಿಗಳ ಗೌರವವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವೆಂದು ಅವರು ಒತ್ತಿ ಹೇಳಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಕ ಹಾಗೂ ನಿಯಮಿತ ಸಾಹಸ ಅಭಿಯಾನಗಳನ್ನು ಆಯೋಜಿಸಲಾಗುವುದು ಎಂದರು. ಈ ಸಾಹಸ ಮತ್ತು ಸಂಸ್ಕಾರಗಳಿಂದ ಕೂಡಿದ ಅಭಿಯಾನವು ವಿದ್ಯಾರ್ಥಿಗಳನ್ನು ಭಾರತದ ಭೂಗೋಳ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಗಳೊಂದಿಗೆ ನೇರವಾಗಿ ಸಂಪರ್ಕಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.
ಅಭಿಯಾನದ ಮೂಲ ಧ್ಯೇಯವನ್ನು ವ್ಯಕ್ತಪಡಿಸುತ್ತಾ ಅವರು ಈ ಶ್ಲೋಕವನ್ನು ಉಲ್ಲೇಖಿಸಿದರು—
“हिमाद्रौ तरुणाः सर्वे संस्कृतध्वजवाहकाः ।
ज्ञानदीपं नयामोऽद्य भारतस्य नवोदितम् ॥”
ಅವರು “ಹಿಮಾಲಯದ ಪ್ರತಿಯೊಂದು ಶಿಖರದಲ್ಲೂ ಸಂಸ್ಕೃತ, ಭಾರತದ ಪ್ರತಿಯೊಂದು ಮನೆಯಲ್ಲೂ ಸಂಸ್ಕೃತ” ಎಂಬುದು ಕೇವಲ ಘೋಷವಾಕ್ಯವಲ್ಲ; ಸಂಸ್ಕೃತ ಭಾಷೆಯನ್ನು ಜನಜೀವನದೊಂದಿಗೆ ಪುನಃ ಬೆಸೆಯುವ ದೃಢ ಸಂಕಲ್ಪವಾಗಿದೆ ಎಂದು ಹೇಳಿದರು. ಈ ಯಾತ್ರೆ ರಾಷ್ಟ್ರೀಯ ಏಕತೆ, ಸಾಂಸ್ಕೃತಿಕ ಸಾಮರಸ್ಯ ಹಾಗೂ ಭಾಷಾ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಜಿ. ಮುರಳೀಕೃಷ್ಣ ಅವರು ಮಾತನಾಡಿ, ಹಿಮಾಲಯವು ಕೇವಲ ಪರ್ವತಶ್ರೇಣಿಯಲ್ಲ; ಅದು ಭಾರತದ ಆಧ್ಯಾತ್ಮಿಕ ಚೇತನ, ಸಾಂಸ್ಕೃತಿಕ ಪರಂಪರೆ ಹಾಗೂ ರಾಷ್ಟ್ರೀಯ ಆತ್ಮದ ಪ್ರತೀಕವಾಗಿದೆ ಎಂದು ಹೇಳಿದರು. ಇಂತಹ ಸಾಹಸ ಮತ್ತು ಸಾಂಸ್ಕೃತಿಕ ಅಭಿಯಾನಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ತಂಡ ಮನೋಭಾವ, ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿ, ಪರಿಸರ ಜಾಗೃತಿ ಹಾಗೂ ರಾಷ್ಟ್ರಭಾವನೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯ ನಿರಂತರವಾಗಿ ಪ್ರೋತ್ಸಾಹಿಸಲಿದೆ ಎಂದರು.
ವಿದ್ಯಾರ್ಥಿ ಕಲ್ಯಾಣ ಅಧಿಷ್ಠಾತ್ರೀ ಪ್ರೊ. ಲೀನಾ ಸಕ್ಕರ್ವಾಲ್ ಅವರು ಮಾತನಾಡಿ, ಈ ಅಭಿಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಸ, ಶಿಸ್ತು, ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಜಾಗೃತಿ ವೃದ್ಧಿಯಾಗಲಿದೆ ಎಂದರು.
ಭಾರತದ ವಿವಿಧ ರಾಜ್ಯಗಳು ಮತ್ತು ಭಾಷಾ ಹಿನ್ನೆಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ಎಂಟು ದಿನಗಳ ಕಾಲ ಒಟ್ಟಾಗಿ ವಾಸವಿದ್ದು, “ಏಕ್ ಭಾರತ್ ಶ್ರೇಷ್ಠ ಭಾರತ್” ಎಂಬ ಭಾವನೆಯನ್ನು ಸಾಕಾರಗೊಳಿಸಲಿದ್ದಾರೆ ಎಂದು ಹೇಳಿದರು.
ಟ್ರೆಕ್ಕಿಂಗ್ ಅಭಿಯಾನದ ಸಂಯೋಜಕ ಡಾ. ಯೋಗೇಂದ್ರ ದೀಕ್ಷಿತ್ ಅವರು ಮಾಹಿತಿ ನೀಡಿ, ಈ ಅಭಿಯಾನದಲ್ಲಿ ವಿಶ್ವವಿದ್ಯಾಲಯದ ವಿವಿಧ ಕ್ಯಾಂಪಸ್‌ಗಳ 48 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ 3 ಮಾರ್ಗದರ್ಶಕರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ತಂಡದ ನೇತೃತ್ವವನ್ನು ಶಿವಮೊಗ್ಗದ ತರುಣೋದಯ ಸಂಸ್ಕೃತ ಸಂಸ್ಥಾನದ ವಿಜಯೇಂದ್ರ ರಾವ್, ಜ್ಯೋತಿ ಎಮ್.ಕೆ ಹಾಗೂ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಶಿಕ್ಷಣ ನಿರ್ದೇಶಕ ಡಾ. ರಾಜೇಂದ್ರ ಶರ್ಮಾ ವಹಿಸಿಕೊಂಡಿದ್ದಾರೆ.
ಈ ಎಂಟು ದಿನಗಳ ಟ್ರೆಕ್ಕಿಂಗ್ ಯಾತ್ರೆಯು ಮೇ 26ರಂದು ಕುಲುವಿನ ಶಿಯೋಬಾಗ್ ಬೇಸ್ ಕ್ಯಾಂಪ್‌ನಿಂದ ಆರಂಭವಾಗಿ, ಸೇಠನ್ ಗ್ರಾಮ, ಕುಕಿ ನಾಲಾ, ಲಾಮ್ಡೋ, ಸುರತು ನಾಲಾ, ದೇವ ಟಿಬ್ಬಾ ಹಾಗೂ ಜಾಬ್ರಿ ನಾಲಾ ಮಾರ್ಗವಾಗಿ ರಾವೋರಿ ಖೋಲಿ ಬೇಸ್ ಕ್ಯಾಂಪ್ ತಲುಪಲಿದೆ. ಈ ಅವಧಿಯಲ್ಲಿ ಭಾಗವಹಿಸುವವರಿಗೆ ಪೀರ್ ಪಂಜಾಲ್ ಹಾಗೂ ಧೌಲಾಧಾರ ಹಿಮಾಲಯ ಪರ್ವತಶ್ರೇಣಿಗಳ ಅದ್ಭುತ ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸುವುದರ ಜೊತೆಗೆ ಹಿಮಾಲಯದ ಜೀವನಶೈಲಿ, ಪರಿಸರ ಹಾಗೂ ಸಂಸ್ಕೃತಿಯನ್ನು ಅರಿಯುವ ಅವಕಾಶ ದೊರೆಯಲಿದೆ.

