ಬಿಡದಿ ಟೌನ್‌ಶಿಪ್ ಯೋಜನೆ: ಸಿಎಂ ಡಿಕೆಶಿ- ಎಚ್ ಡಿಕೆ ಸವಾಲ್‌- ಜವಾಬ್‌; ಸಾರ್ವಜನಿಕ ಸ್ಥಳದಲ್ಲೇ ಸಭೆಗೆ ಕುಮಾರಸ್ವಾಮಿ ಪಟ್ಟು

ಬಿಡದಿ ಟೌನ್‌ಶಿಪ್ ಯೋಜನೆ: ಸಿಎಂ ಡಿಕೆಶಿ- ಎಚ್ ಡಿಕೆ ಸವಾಲ್‌- ಜವಾಬ್‌; ಸಾರ್ವಜನಿಕ ಸ್ಥಳದಲ್ಲೇ ಸಭೆಗೆ ಕುಮಾರಸ್ವಾಮಿ ಪಟ್ಟು
ಬೆಂಗಳೂರು : ಬಿಡದಿ ಟೌನ್‌ಶಿಪ್‌ ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಸವಾಲ್‌ -ಜವಾಬ್‌ ನಡೆದಿದ್ದು ಸಾರ್ವಜನಿಕ ಸ್ಥಳದಲ್ಲೇ ಸಭೆ ನಡೆಯಲಿ ಎಂದು ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಏತನ್ಮಧ್ಯೆ ಟೌನ್‌ಶಿಪ್‌ ದಂಧೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ನಾಗರಭಾವಿಯೊಂದರ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಅಸಲಿ ರೈತರ’ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಕುಮಾರಸ್ವಾಮಿ ನೀಡಿದ ಸವಾಲಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ‘ಸೈ’ ಎಂದಿದ್ದು, ಜೂನ್‌ 26ರಂದು ವಿಧಾನಸೌಧದ ತಮ್ಮ ಕೊಠಡಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಆಹ್ವಾನಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಕುಮಾರಸ್ವಾಮಿ, ”ವಿಧಾನಸೌಧದಲ್ಲಿ ಸಂತ್ರಸ್ತ ರೈತರನ್ನು ಹೊರಗಿಟ್ಟು ಸಭೆ ನಡೆಸುವುದು ಸರಿಯಲ್ಲ. ಹಾಗಾಗಿ, ಬಿಡದಿ ಅಥವಾ ಬಾಧಿತ ಪ್ರದೇಶ ಭೈರಮಂಗಲದ ಯಾವುದಾದರೂ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಸಭೆ ಕರೆಯಿರಿ,” ಎಂದು ಸಲಹೆ ನೀಡಿದ್ದಾರೆ.
ಸಿಎಂ ಪತ್ರದಲ್ಲಿ ಹೇಳಿದ್ದೇನು?
ಸೋಮವಾರ ಇಬ್ಬರ ನಡುವೆ ಮೂರು ಸುತ್ತಿನ ಸವಾಲ್‌- ಜವಾಬ್‌ ನಡೆದಿದೆ. ಬಿಡದಿ ಟೌನ್‌ಶಿಪ್‌ ಯೋಜನೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದ ಮುಖ್ಯಮಂತ್ರಿಗಳು, ”ಜೂನ್‌ 26 ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ನನ್ನ ಕಚೇರಿಗೆ ಬನ್ನಿ,” ಎಂದು ಆಹ್ವಾನ ನೀಡಿದರು. ”ತಾವೇ ಆರಂಭಿಸಿದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಚರ್ಚಿಸಲು ಉತ್ಸುಕನಾಗಿದ್ದೇನೆ. ತಾವು ಮತ್ತು ತಮ್ಮ ತಂಡದ ಐವರು ಪ್ರತಿನಿಧಿಧಿಗಳೊಂದಿಗೆ ವಿಧಾನಸೌಧದ ನನ್ನ ಕಚೇರಿಗೆ ಆಗಮಿಸಬೇಕು,” ಎಂದು ಸಿಎಂ ಪತ್ರದಲ್ಲಿ ಕೋರಿದ್ದರು.
ಮುಖ್ಯಮಂತ್ರಿಗಳ ಈ ಆಹ್ವಾನಕ್ಕೆ ತಕ್ಷಣವೇ ಪ್ರತ್ಯುತ್ತರ ಬರೆದಿರುವ ಕುಮಾರಸ್ವಾಮಿ ಅವರು, ”ಬಿಡದಿ ಅಥವಾ ಭೈರಮಂಗಲದ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಯಲಿ. ಟೌನ್‌ಶಿಪ್‌ ಯೋಜನೆಯಿಂದ ಸಂಕಷ್ಟಕ್ಕೀಡಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು ಸೇರಿ ಎಲ್ಲರ ಸಮ್ಮುಖದಲ್ಲಿ ಮುಕ್ತವಾಗಿ ಚರ್ಚಿಸಿದರೆ, ಪರಿಹಾರ ಕಂಡುಕೊಳ್ಳಲು ಅವಕಾಶವಾಗುತ್ತದೆ. ವಿಧಾನಸೌಧದಲ್ಲಿ ಬಾಧಿತ ರೈತರು ಮತ್ತು ಗ್ರಾಮಸ್ಥರನ್ನು ಹೊರಗಿಟ್ಟು ಸಭೆ ನಡೆಸಿ ಪ್ರಯೋಜನವಿಲ್ಲ,” ಎಂದು ಹೇಳಿದ್ದಾರೆ. ”ತಾವು ನಿಗದಿಪಡಿಸಿರುವ ಜೂನ್‌ 26 ರಂದು ನನಗೆ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವುದರಿಂದ, ಜೂನ್‌ 27 ರಂದು ಈ ಸಭೆ ಕರೆಯಿರಿ. ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಈ ಸಭೆಗೆ ಯೋಜನೆಯಿಂದ ಬಾಧಿತರಾಗುವ ಜನರನ್ನೂ ಆಹ್ವಾನಿಸಬೇಕು” ಎಂದು ಸಿಎಂಗೆ ಪತ್ರದಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ನಾಗರಬಾವಿಯಲ್ಲಿ ಟೌನ್‌ಶಿಪ್‌ ದಂಧೆ ಆರೋಪ
‘‘ರಿಯಲ್‌ ಎಸ್ಟೇಟ್‌ ದುರಾಸೆಯಿಂದ ಮುಗ್ಧ ರೈತರಿಂದ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ದಂಧೆ ಕೋರರಿಗೆ ನೀಡಲು ಬ್ರೋಕರ್‌ ಕೆಲಸ ಮಾಡುತ್ತಿದ್ದಾರೆ,’’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ‘‘ನಿಮ್ಮ ಪಾಪದ ಕೂಡ ತುಂಬಿದೆ. ಶಾಸ್ತಿಯಾಗುವ ಕಾಲ ಸನಿಹದಲ್ಲಿದೆ,’’ ಎಂದು ಎಚ್ಚರಿಕೆ ನೀಡಿದರು. ‘‘ಟೌನ್‌ಶಿಪ್‌ಗೆ ಸಂಬಂಧಿಸಿದ ಯಾವುದೇ ಕೆಲಸಗಳು ರಾಮನಗರ ಡಿಸಿ ಕಚೇರಿಯಲ್ಲಿ ನಡೆಯುತ್ತಿಲ್ಲ. ಎಲ್ಲವೂ ತೆರೆಮರೆಯಲ್ಲಿ ಗೌಪ್ಯವಾಗಿ ನಡೆಯುತ್ತಿದೆ. ವಿಧಾನಸೌಧ ಅಥವಾ ಸರಕಾರಿ ಕಚೇರಿಯಲ್ಲಿ ಕೆಲಸಗಳು ನಡೆದರೆ, ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ ಮತ್ತು ಕುಮಾರಸ್ವಾಮಿ ಅವರಿಗೆ ಮಾಹಿತಿ ಹೋಗುತ್ತದೆ ಎಂಬ ಕಾರಣಕ್ಕೆ ನಾಗರಬಾವಿಯಲ್ಲಿ ಬಾಡಿಗೆ ಮನೆ ಯೊಂದರಿಂದ ಟೌನ್‌ಶಿಪ್‌ ದಂಧೆ ಮಾಡುತ್ತಿದ್ದಾರೆ. ಕೆಲವು ಪುಢಾರಿಗಳು, ಟೌನ್‌ಶಿಪ್‌ ಕಿಂಗ್‌ಪಿನ್‌ ಚೇಲಾಗಳು ಸೇರಿಕೊಂಡು ಆ ಮನೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ,’’ ಎಂದು ಆಪಾದಿಸಿದರು. ‘
‘ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರು 2007ರಲ್ಲಿ ವಿಧಾನಸಭೆ ಕಲಾಪದಲ್ಲಿ ಹೇಳಿದ್ದ ಮಾತುಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ. ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶಿವಕುಮಾರ್‌ ಅವರು ಈಗ ಟೌನ್‌ ಶಿಪ್‌ ಯೋಜನೆಯನ್ನು ಕಾರ್ಯಗತ ಮಾಡಿಯೇ ತೀರುತ್ತೇನೆ ಎಂದು ಹೇಳುತ್ತಿದ್ದಾರೆ. ಶೇ.80ರಷ್ಟು ರೈತರು ಭೂಮಿ ಬಿಟ್ಟುಕೊಡಲು ತಯಾರಿಲ್ಲ. ಆದರೂ ಯೋಜನೆ ಕೈಬಿಡಲು ಏನು ಸಮಸ್ಯೆ? ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೂ ಈ ಹಿಂದೆ ಯೋಜನೆಯನ್ನು ವಿರೋಧಿಸಿದ್ದರು. ಆಗ ದೊಡ್ಡ ಗಂಟಲಿನಲ್ಲಿ ವಿರೋಧಿಸಿ ವೀರಾವೇಷದ ಮಾತನಾಡಿದ್ದರು. ಈಗ ಎಲ್ಲಅಕ್ರಮಗಳನ್ನು ನೋಡಿಯೂ ಜಾಣಮೌನ ವಹಿಸಿದ್ದಾರೆ,’’ ಎಂದು ದೂರಿದರು. 2007ರ ಆಗಸ್ಟ್‌ನಲ್ಲಿ ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆಯ ದಾಖಲೆಗಳನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಸಿಎಂ ಜೈಲಿಗೆ ಹೋಗಲ್ಲ
ಬಿಡದಿ ಟೌನ್‌ಶಿಪ್‌ ಸಮರ್ಥನೆ ಮಾಡಿಕೊಂಡು ಮುಖ್ಯಮಂತ್ರಿಗಳು ನೀಡಿದ್ದ ಎಲ್ಲ ಹೇಳಿಕೆಗಳಿಗೆ ಸ್ಪಷ್ಟನೆಗಳನ್ನು ನೀಡಿದ ಕುಮಾರಸ್ವಾಮಿ, ‘‘ನೋಟಿಫೈ ಆಗಿರುವ ಭೂಮಿಯನ್ನು ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲೇ ಎಂದು ಡಿ.ಕೆ.ಶಿವಕುಮಾರ್‌ ಕೇಳುತ್ತಿದ್ದಾರೆ. ಅರ್ಕಾವತಿಯಲ್ಲಿ ರೀಡೂ ಮಾಡಿಕೊಂಡವರೇ ನೆಮ್ಮದಿಯಾಗಿ ಓಡಾಡಿಕೊಂಡಿರುವಾಗ, ರೈತರ ಉದ್ಧಾರಕ್ಕಾಗಿ ಯೋಜನೆಯನ್ನೇ ಕೈಬಿಟ್ಟರೆ ಮುಖ್ಯಮಂತ್ರಿ ಜೈಲಿಗೆ ಹೋಗುತ್ತಾರಾ? ಟೌನ್‌ಶಿಪ್‌ ಮಾಡಿ ರೈತರ ಭೂಮಿ ಕೊಳ್ಳೆ ಹೊಡೆಯುವುದೇ ಮುಖ್ಯವಾಗಿದೆ. ರೈತರನ್ನು ಉಳಿಸಿಕೊಳ್ಳಲು ಡಿನೋಟಿಫಿಕೇಷನ್‌ ಮಾಡಿದರೆ ಯಾರೂ ಜೈಲಿಗೆ ಹೋಗುವುದಿಲ್ಲ,’’ ಎಂದು ಹೇಳಿದರು.

Leave a Reply

Your email address will not be published. Required fields are marked *