ಶಿವಮೊಗ್ಗದಲ್ಲಿ 7ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ : ಉದ್ಘಾಟನೆಗೆ ಸುತ್ತೂರು ಶ್ರೀ ಸಾನಿಧ್ಯ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೆಕ್ಕಿನಕಲ್ಮಠ ಶ್ರೀಗಳು.
ಶಿವಮೊಗ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ಶಿವಮೊಗ್ಗ ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳು ಮತ್ತು ವಚನಾಭಿಮಾನಿಗಳ ಸಹಕಾರದೊಂದಿಗೆ ಶಿವಮೊಗ್ಗ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ 24, ಮಂಗಳವಾರ ಮತ್ತು ಮಾರ್ಚ್ 25, ಬುಧವಾರ 2026 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ‘ಇಂದಿನ ಸವಾಲುಗಳು – ವಚನಗಳಲ್ಲಿ ಉತ್ತರ ‘ ಎಂಬ ಚಿಂತನೆಯೊಂದಿಗೆ ನಡೆಯಲಿರುವ ಈ ಸಮ್ಮೇಳನಕ್ಕೆ ಶಿವಮೊಗ್ಗದ ಶ್ರೀ ಬೆಕ್ಕಿನಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಸರ್ವಾಧ್ಯಕ್ಷರಾಗಿರಲಿದ್ದಾರೆ.
ಸಮ್ಮೇಳನದ ಉದ್ಘಾಟನಾ ಸಮಾರಂಭವು ಮಾರ್ಚ್ 24 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿದ್ದು, ಶರಣ ಸಾಹಿತ್ಯ ಪರಿಷತ್ ನ ಮಹಾಪೋಷಕರಾದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿ, ಎಲ್ಲ ಜಿಲ್ಲೆಗಳಲ್ಲೂ ಶರಣ ಸಾಹಿತ್ಯ ಪ್ರಸಾರಕ್ಕೆ ಅಮೋಘ ಕೊಡುಗೆ ನೀಡುತ್ತಿರುವ ಸುತ್ತೂರು ಸಂಸ್ಥಾನದ ಸುತ್ತೂರು ಶ್ರೀಗಳು ಇದರ ಸಾನಿಧ್ಯ ವಹಿಸುತ್ತಿರುವುದು ಶಿವಮೊಗ್ಗದ ಜನತೆ ಹೆಮ್ಮೆ ಪಡುವ ವಿಚಾರ. ಎಂದು ಶ್ರೀ ಎಸ್ ರುದ್ರೇಗೌಡರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅವರ ಸಮ್ಮುಖದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಸಿ ಸೋಮಶೇಖರ್ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ., ಮಾಜಿ ವಿಧಾನ ಪರಿಷತ್ ಶಾಸಕರು ಹಾಗೂ ಉದ್ಯಮಿಗಳಾದ ಎಸ್ ರುದ್ರೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಂಬ್ರಯ್ಯಮಠ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಸಚಿವರಾದ ಮಧು ಬಂಗಾರಪ್ಪನವರು, ಸಂಸದರಾದ ಬಿ ವೈ ರಾಘವೇಂದ್ರರವರು, ಸಮಾಜದ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಅವರು, ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿಗಳಾದ ಶರತ್ ಅನಂತಮೂರ್ತಿಯವರು, ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಚ್. ಎನ್. ಮಹಾರುದ್ರ ಅವರು ಉಪಸ್ಥಿತರಿರಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶಿಕಾರಿಪುರ ತಾಲ್ಲೂಕಿನ ಉಡುತಡಿಯಿಂದ ಯಾತ್ರೆಯ ಮೂಲಕ ಆಗಮಿಸುವ ‘ಅಕ್ಕಮಹಾದೇವಿ ಜ್ಯೋತಿ’ಯನ್ನು ಶಿವಮೊಗ್ಗದ ಅಕ್ಕಮಹಾದೇವಿ ವೃತ್ತದಲ್ಲಿ ಸ್ವಾಗತಿಸಿ, ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಗುವುದು.
ಇಂದಿನ ಸವಾಲುಗಳು ಮತ್ತು ವಚನಗಳಲ್ಲಿ ಉತ್ತರ ಕುರಿತ ಚಿಂತನೆಯನ್ನು ಎರಡೂ ದಿನಗಳ ಕಾಲ ವಿವಿದ ಗೋಷ್ಟಿಗಳ ಮೂಲಕ ಚರ್ಚಿಸಲಾಗುವುದು. ಸಮ್ಮೇಳನದ ಮೊದಲನೆಯ ದಿನ 12 : 30 ರಿಂದ 1 : 15ರ ವರೆಗೆ “ವಚನಗಳಲ್ಲಿ ನ್ಯಾಯದ ಕುರಿತ ಉತ್ತರಗಳ ಕುರಿತು” ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ 2:15 ರಿಂದ 3:45 ರ ವರೆಗೆ “ಮಾಧ್ಯಮದಲ್ಲಿ ಇಂದಿನ ಸವಾಲುಗಳು – ವಚನಗಳಲ್ಲಿ ಉತ್ತರ” ವಿಷಯದ ಕುರಿತು ಸಂವಾದ ಗೋಷ್ಠಿ ನಡೆಯಲಿದ್ದು ಹಿರಿಯ ಪತ್ರಕರ್ತರಾದ ಗೌರೀಶ್ ಅಕ್ಕಿ ಅವರು, ಸಾಹಿತಿಗಳು ಮತ್ತು ಪತ್ರಕರ್ತರಾದ ಶ್ರೀಮತಿ ಕುಸುಮಾ ಆಯರಳ್ಳಿ ಅವರು, ದಿ ಹಿಂದೂ ಪತ್ರಿಕೆಯ ಶ್ರೀ ಜಿ. ಟಿ. ಸತೀಶ್ ಅವರು ಸಂವಾದ ನಡೆಸಲಿದ್ದಾರೆ, ಈ ಗೋಷ್ಠಿಯ ನಿರ್ವಹಣೆಯನ್ನು ಚಂದನ ಮತ್ತು ದೂರದರ್ಶನದ ಹಿರಿಯ ವರದಿಗಾರರಾದ ಆರ್.ಎಸ್ ಹಾಲಸ್ವಾಮಿ ಅವರು ನಡೆಸಿಕೊಡಲಿದ್ಧಾರೆ.
ಸಂಜೆ 4.00 ರಿಂದ 5.30 ರ ವರೆಗೆ “ರಾಜಕೀಯದಲ್ಲಿ ಇಂದಿನ ಸವಾಲುಗಳು ವಚನಗಳಲ್ಲಿ ಉತ್ತರ” ಕುರಿತು ಸಂವಾದ ನಡೆಯಲಿದೆ. ಈ ಗೋಷ್ಠಿಯಲ್ಲಿ ಶಿವಮೊಗ್ಗದ ಮಾಜಿ ಸಂಸದರಾದ ಶ್ರೀ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಡಾ|| ಧನಂಜಯ ಸರ್ಜಿ, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕಿಸ್ ಬಾನು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀ ಆರ್. ಕೆ. ಸಿದ್ದರಾಮಣ್ಣ ಅವರು ಸಂವಾದ ನಡೆಸಲಿದ್ದಾರೆ. ಈ ಗೋಷ್ಠಿಯ ನಿರ್ವಹಣೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಹೆಚ್. ಸಿ. ಯೋಗೇಶ್ ಅವರು ನಡೆಸಿಕೊಡಲಿದ್ದಾರೆ.
ಸಂಜೆ 6.00 ರಿಂದ 7.00 ರ ವರೆಗೆ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 75ನೇ ವರ್ಷದ ವಿಶೇಷ ಕಾರ್ಯಕ್ರಮ “ಅಮೃತ ಜಂಗಮ” ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಡೆಯ ಸಂಸ್ಥಾನ ಮಠದ ಶ್ರೀ ಮ. ನಿ. ಪ್ರ. ಡಾ. ಮಹಾಂತ ಮಹಾಸ್ವಾಮಿಗಳವರು ವಹಿಸಲಿದ್ದಾರೆ.
ನಂತರ ಸಂಜೆ 7.00 ರಿಂದ 8.30 ರ ವರೆಗೆ “ವಚನ ಸಾಂಸ್ಕೃತಿಕ ಸಂಜೆ” ನಡೆಯಲಿದ್ದು, ಬೆಂಗಳೂರಿನ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಬಾಪು ಪದ್ಮನಾಭ ಅವರಿಂದ ವಚನ ಭಾವಯಾನ ಕಾರ್ಯಕ್ರಮ ಮತ್ತು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮೈತ್ರಿ ಶಿಕ್ಷಣ ಮಹಾವಿದ್ಯಾಲಯಗಳ ಬಿ.ಎಡ್. ಪ್ರಶಿಕ್ಷಣಾರ್ಥಿಗಳಿಂದ ವಚನನೃತ್ಯ ಪ್ರದರ್ಶನಗೊಳ್ಳಲಿದೆ.
ಎರಡನೇ ದಿನವೂ 3 ಗೋಷ್ಟಿಗಳು ನಡೆಯಲಿವೆ. 10.00 ರಿಂದ 11.30 ರ ವರೆಗೆ “ಶಿಕ್ಷಣದಲ್ಲಿ ಇಂದಿನ ಸವಾಲುಗಳು ಮತ್ತು ವಚನಗಳಲ್ಲಿ ಉತ್ತರ” ವಿಷಯದ ಕುರಿತು ಸಂವಾದ ನಡೆಯಲಿದೆ. ಈ ಸಂವಾದದಲ್ಲಿ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಜೆ. ಎಸ್. ಸದಾನಂದ ಅವರು, ಚಿಕ್ಕನಾಯಕನಹಳ್ಳಿಯ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಬಸವರಾಜು ಹೊನ್ನೆಬಾಗಿ ಅವರು, ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಜಿ. ಧನಂಜಯ ಅವರು ಸಂವಾದ ನಡೆಸಲಿದ್ದಾರೆ. ಈ ಗೋಷ್ಠಿಯ ನಿರ್ವಹಣೆಯನ್ನು ಬೆಂಗಳೂರಿನ ಡಿ.ಎಸ್.ಇ.ಆರ್.ಟಿ (DSERT) ಉಪ ನಿರ್ದೇಶಕರಾದ ಡಾ. ಜಿ. ವಿ. ಹರಿಪ್ರಸಾದ್ ಅವರು ನಡೆಸಿಕೊಡಲಿದ್ದಾರೆ.
ಬೆಳಿಗ್ಗೆ 11.45 ರಿಂದ 1.15 ರವರೆಗೆ ‘ಆಡಳಿತದಲ್ಲಿ ಇಂದಿನ ಸವಾಲುಗಳು ಮತ್ತು ವಚನಗಳಲ್ಲಿ ಉತ್ತರ’ ವಿಷಯದ ಕುರಿತು ವಿಶೇಷ ಸಂವಾದ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ. ನಿಖಿಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೇಮಂತ್ ಎನ್., ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ. ಮಾಯಣ್ಣ ಗೌಡ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಆರ್. ಮೋಹನ್ ಕುಮಾರ್ ಅವರು ಸಂವಾದ ನಡೆಸಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆ ಅವರು ಈ ಸಂವಾದದ ನಿರ್ವಹಣೆಯನ್ನು ಮಾಡಲಿದ್ದಾರೆ.
ಮಧ್ಯಾಹ್ನ 2.15 ರಿಂದ 3.45 ರವರೆಗೆ ‘ಧರ್ಮದಲ್ಲಿ ಇಂದಿನ ಸವಾಲುಗಳು ಮತ್ತು ವಚನಗಳಲ್ಲಿ ಉತ್ತರ ‘ ಎಂಬ ವಿಷಯದ ಕುರಿತು ಅತ್ಯಂತ ಮಹತ್ವದ ಸಂವಾದ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಗೋಷ್ಠಿಯಲ್ಲಿ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಡಾ. ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಮಹಾಸ್ವಾಮಿಗಳವರು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಬಸವಕೇಂದ್ರದ ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು, ರಟ್ಟಿಹಳ್ಳಿಯ ಕಬ್ಬಿಣಕಾಂತಿ ಮಠದ ಶ್ರೀ ಷ. ಬ್ರ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಗೂ ಶಿಕಾರಿಪುರದ ವಿರಕ್ತಮಠದ ಶ್ರೀ ಮ. ನಿ. ಪ್ರ. ಚನ್ನಬಸವ ಸ್ವಾಮಿಗಳವರು ಸಂವಾದಕರಾಗಿ ತಮ್ಮ ವಿಚಾರಗಳನ್ನು ಮಂಡಿಸಿ ಧರ್ಮದ ನಿಜವಾದ ಅರ್ಥ ಮತ್ತು ಇಂದಿನ ಸಮಾಜಕ್ಕೆ ಅದರ ಅಗತ್ಯತೆಯ ಕುರಿತು ಆಳವಾದ ಬೆಳಕು ಚೆಲ್ಲಲಿದ್ದಾರೆ. ಈ ಇಡೀ ಗೋಷ್ಠಿಯ ಅರ್ಥಪೂರ್ಣ ನಿರ್ವಹಣೆಯನ್ನು ಮೂಲೆಗದ್ದೆಯ ಶ್ರೀ ಸದಾನಂದ ಶಿವಯೋಗಾಶ್ರಮದ ಶ್ರೀ ಮ. ನಿ. ಪ್ರ. ಅಭಿನವ ಚನ್ನಬಸವ ಸ್ವಾಮಿಗಳವರು ನಡೆಸಿಕೊಡಲಿದ್ದಾರೆ.
ಅಂದೇ ಸಂಜೆ 4.00 ರಿಂದ 5.30 ರವರೆಗೆ ನಡೆಯಲಿರುವ ಈ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ನಿಡಸೋಸಿಯ ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಆನಂದಪುರದ ಶ್ರೀ ಮುರುಘಾಮಠ ಹಾಗೂ ಶಿವಮೊಗ್ಗದ ಶ್ರೀ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಮ್ಮೇಳನಾಧ್ಯಕ್ಷರಾಗಿ ಉಪಸ್ಥಿತರಿರುತ್ತಾರೆ. ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಚ್. ಎಸ್. ಮಹಾರುದ್ರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಎಂ. ಎಸ್. ಆಶಾದೇವಿ ಅವರು ಸಮಾರೋಪ ನುಡಿಗಳನ್ನು ಆಡಲಿದ್ದಾರೆ.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಭಾ.ಜ.ಪ. ಅಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್. ಸಿ. ಜಗದೀಶ್, ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ. ಎಸ್. ಷಡಕ್ಷರಿ ಅವರು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶ್ರೀ ರುದ್ರಮುನಿ ಎಸ್. ಸಜ್ಜನ್, ಶಿವಮೊಗ್ಗ ಜೆ.ಎಸ್.ಎಸ್. ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಕಿರಣ್ ದೇಸಾಯಿ, ಮತ್ತು ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಎಚ್. ಅವರು ಉಪಸ್ಥಿತರಿರುತ್ತಾರೆ. ಅಲ್ಲದೆ, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜಿ. ಇ. ಗಾಯತ್ರಿ ಪಾಟೀಲ್ ಹಾಗೂ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶ್ರೀ ಪಿ. ಆರ್. ಸುಹಾಸ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಅಂಗವಾಗಿ ಎರಡೂ ದಿನವೂ ಬೆಳಿಗ್ಗೆ ಬೆಳಿಗ್ಗೆ 6.30 ರಿಂದ 7.30ರ ವರೆಗೆ ಸಾಮೂಹಿಕ ವಚನಾನುಸಂಧಾನ ನಡೆಯಲಿದೆ. ಈ ಗಾಯನ ಸುಧೆಗೆ ಮೊದಲ ದಿನ ಗುರುಗುಹ ಶ್ರೀ ಶೃಂಗೇರಿ ನಾಗರಾಜ್ ರವರು ಹಾಗೂ ಎರಡನೇ ದಿನ ಶಿವಮೊಗ್ಗದ ಮಧುರ ಕಲಾವೃಂದದ ಶ್ರೀಮತಿ ಟಿ. ಜೆ. ನಾಗರತ್ನ ಅವರು ನಿರ್ದೇಶನ ನೀಡಲಿದ್ದಾರೆ. ಮೊದಲ ದಿನ ಜಡೆ ಮಠದ ಡಾ. ಮಹಾಂತ ಸ್ವಾಮಿಗಳು ಮತ್ತು ಎರಡನೇ ದಿನ ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮಿಗಳವರು ಸಾನಿಧ್ಯ ವಹಿಸಿ, ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಇಂದು ನಮ್ಮ ನಡುವೆ ಇರುವ ಹಲವು ಸಮಸ್ಯೆಗಳಿಗೆ ಚಿಂತನಾತ್ಮಕವಾಗಿ ಉತ್ತರ ಹುಡುಕುವುದರ ಜೊತೆಗೆ ಬಸವಾದಿ ಶರಣರ ಅಶಯದಂತೆ ಸಮಾಜದ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತರುವ ಜಾತ್ಯಾತೀತ ಕಾರ್ಯಕ್ರಮ ಇದಾಗಿದೆ.
ಈ ಪತ್ರಿಕಾ ಗೊಷ್ಟಿಯಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಚ್.ಎನ್.ಮಹಾರುದ್ರ, ವಿಧಾನ ಪರಿಷತ್ ಮಾಜಿ ಸದಸ್ಯರಾದ ರುದ್ರೇಗೌಡರು, ಶ್ರೀಬಸವೇಶ್ವರ ವೀರಶೈವ- ಲಿಂಗಾಯತ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಜ್ಯೋತಿಪ್ರಕಾಶ್, ಬಸವ ಕೇಂದ್ರದ ಅಧ್ಯಕ್ಷ ಬೆನಕಪ್ಪ, ಲವ ಕುಮಾರ್, ರುದ್ರೇಶ್, ರುದ್ರಮುನಿ ಸಜ್ಜನ್ ಇತರರು ಇದ್ದರು.