ಮಾನವನ ಪ್ರಯತ್ನಕ್ಕೆ ಭಗವಂತನ ಅನುಗ್ರಹವೂ ಬೇಕು : ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು
ಶಿವಮೊಗ್ಗ, ಮಾ.೩೦: ಹಕ್ಕಿ ಹಾರಲು ರೆಕ್ಕೆಗಳ ಸಹಕಾರ ಹೇಗೆ ಬೇಕೋ ಹಾಗೆಯೇ ಮಾನವನ ಪ್ರಯತ್ನಕ್ಕೆ ಭಗವಂತನ ಅನುಗ್ರಹವೂ ಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ರು ಹೇಳಿದರು.
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಂಸ್ಥೆ, ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಭಜನಾ ಪರಿಷತ್ ಇವರ ಸಹಯೋಗದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜರುಗಿದ ವಿಷ್ಣು ಸಹಸ್ರನಾಮ ಪಾರಾಯಣದ ಅಂತ್ಯದಲ್ಲಿ ಆಶೀರ್ವಚನ ನೀಡಿದರು.
ಮನುಷ್ಯನ ಪ್ರತಿ ಕಾರ್ಯಕ್ಕೆ ಭಗವಂತನ ಅನುಗ್ರಹ ಬೇಕೇ ಬೇಕು. ಮಹಾವಿಷ್ಣುವನ್ನು ಮನೆಯೊಳಗೆ ಇಟ್ಟರೆ ಸಾಲದು. ಮನದೊಳಗೂ ಇಡಬೇಕು. ಆಗ ನಮ್ಮ ಬದುಕು ನಿತ್ಯೋತ್ಸವವಾಗುತ್ತದೆ. ನಿತ್ಯದಾನ, ಧರ್ಮ, ಸತ್ಕರ್ಮ ಆಚರಣೆ ಮಾಡಿದಾಗ ನಿತ್ಯಸಂಪತ್ತು ನಮ್ಮದಾಗುತ್ತದೆ. ಯಶಸ್ಸು, ಕೀರ್ತಿ ಲಭಿಸುತ್ತದೆ. ಹೃದಯದೊಳಗೆ ಭಗವಂತ ಬಂದು ನಿಲ್ಲುತ್ತಾನೆ. ಸಕಲ ಮಂಗಲಗಳಿಗೆ ಮನೆಯಾಗಿರುವವನು ಶ್ರೀಹರಿ. ಯಾರು ಭಗವಂತನನ್ನು ಹೃದಯದಲ್ಲಿಟ್ಟುಕೊಳ್ಳುತ್ತಾರೋ ಅವರಿಗೆ ಸದಾ ನಿತ್ಯೋತ್ಸವವಾಗಿರುತ್ತದೆ ಎಂದರು.
ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಧರ್ಮರಾಯ, ಶ್ರೀಕೃಷ್ಣನಿಗೆ ಮುಂದೇನು ಮಾಡಬೇಕು ಮಾರ್ಗದರ್ಶನ ಕೊಡುವಂತೆ ವಿನಂತಿಸಿದಾಗ ಭೀಷ್ಮರು ಮದ್ಯಪ್ರವೇಶಿಸಿ, ಜಗತ್ತಿನಲ್ಲ್ಲಿ ಸರ್ವಶ್ರೇಷ್ಠವಾದುದು ವಿಷ್ಣು ಸಹಸ್ರನಾಮ. ಅದರ ಪ್ರಕಾರ ಮುಂದೆ ಸಾಗು ಎಂದು ಅರ್ಥಸಹಿತವಾಗಿ ಧರ್ಮರಾಯನಿಗೆ ಹೇಳುತ್ತಾನೆ ಎನ್ನುವದುನ್ನು ವಿವರಿಸಿದ ಅವರು, ವಿಷ್ಣು ಸಹಸ್ರನಾಮ ಪಾರಾಯಣ ಶ್ರೀವಿಷ್ಣುವಿಗೆ ಸಮರ್ಪಣೆಯಾಗಿದೆ. ಇದರ ಫಲ ಸರ್ವರಿಗೂ ಲಭಿಸಲಿ. ನಾಡಿನಲ್ಲಿ ಸುಖ-ಶಾಂತಿ ಸಮೃದ್ಧಿಯಾಗಲಿ ಎಂದು ಹಾರೈಸಿದರು.
ಶ್ರೀಗಂಧ ಸಂಸ್ಥೆ ಎಲ್ಲ ಸಮಯವನ್ನು ಸಮಾಜದ ಏಳೆಗೆ ಶ್ರಮಿಸುತ್ತಿದೆ. ಈಶ್ವರಪ್ಪ ಮಾಜಿ ಉಪಮುಖ್ಯಮಂತ್ರಿಗಳಾಗಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ದೇವರು ಅವರಿಗೆ ಇನ್ನೂ ಹೆಚ್ಚಿನ ಉನ್ನತ ಸ್ಥಾನಗಳನ್ನು ನೀಡಲಿ ಎಂದು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಬಾಳಗಾರು ಮಠದ ಕಿಲಿಯ ಪೀಠಾಧಿಪತಿಗಳಾದ ಶ್ರೀ ಅಕ್ಟೋಭ್ಯ ರಾಮಪ್ರಿಯತೀರ್ಥರು ಆಶೀರ್ವಚನ ನೀಡಿದರು.
ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್‌ನ ಶಿವಮೊಗ್ಗ ಘಟಕ ಅಧ್ಯಕ್ಷ ಜೋಯ್ಸ್ ರಾಮಾಚಾರ್, ಶ್ರೀಗಂಧ ಕೋಶಾಧ್ಯಕ್ಷ ಕೆ.ಈ. ಕಾಂತೇಶ್, ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ, ಪ್ರಮುಖರಾದ ಅಚ್ಯುತ್‌ರಾವ್, ಕೆ.ಜೆ. ಕುಮಾರ ಶಾಸ್ತ್ರೀ, ಶಬರೀಶ್ ಕಣ್ಣನ್, ಉಮೇಶ್ ಆರಾಧ್ಯ, ಮಂಜುನಾಥ್ ಶರ್ಮ ಮೊದಲಾದವರು ಉಪಸ್ಥಿತರಿದ್ದರು.